ಕಾರವಾರ: ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಿಂದೂ ಪ್ರೌಢಶಾಲೆ, ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆ ಹಾಗೂ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಕರಾವಳಿ ಟ್ರೇನಿಂಗ್ ಇನ್ಸ್ಟಿಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿಂದೂ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿ ಆನಂದ ತಾಮಸೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬುವುದರ ಕುರಿತು ಮನಮುಟ್ಟುವಂತೆ ತಿಳಿಸಿದರು. ಜೊತೆಗೆ ವಿದ್ಯಾರ್ಥಿ ಜೀವನದ ಇಂದಿನ ಜ್ವಲಂತ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ವಿಡಿಯೋ ಕ್ಲಿಪಿಂಗ್ ಮುಖಾಂತರ ಆಕರ್ಷಕವಾಗಿ ವಿವರಿಸಿದರು.
ಶಿಕ್ಷಕ ಸಂತೋಷ ಎಂ.ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ಧ ಹಳದಿಪುರಕರ, ಹಿಂದೂ ಪ್ರೌಢಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕ ರೋಹಿದಾಸ ವಿ.ದೇಶಭಂಡಾರಿ, ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಬಂಟ ಹಾಗೂ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಉಪಸ್ಥಿತರಿದ್ದರು.