ಶಿರಸಿ: ಕಳೆದ 3-4 ವರ್ಷದಿಂದ ಹಲವು ತಾಂತ್ರಿಕ ಕಾರಣದಿಂದ ಸರ್ಕಾರಕ್ಕೆ ಹೋಗಿ ಹಿಂದೆ ಬರುತ್ತಿದ್ದ ಶಿರಸಿ ನಗರದ ಮಾಸ್ಟರ್ ಪ್ಲಾನ್ ಶುಕ್ರವಾರ ಸಂಜೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಈ ಯೋಜನೆಯ ಅನುಷ್ಠಾನಕ್ಕೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ವಿಶೇಷ ಆಸಕ್ತಿ ತಾಳಿದ್ದರಿಂದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ ನೆನಗುದಿಗೆ ಬಿದ್ದಿದ್ದ ಶಿರಸಿ ಮಾಸ್ಟರ್ ಪ್ಲಾನ್ ಗೆ ಮರುಜೀವ ಕೊಡಲು ಪ್ರಯತ್ನಿಸಿದ್ದರು. 2-3 ಸಲ ಬೆಂಗಳೂರಿಗೆ ಹೋಗಿ,ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಅಂತಿಮ ರೂಪಕ್ಕೆ ತರಲು ಮುಂದಾಗಿದ್ದರು. ಹಿಂದಿನ ತಿಂಗಳು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ,ಸ್ಥಾಯಿಸಮಿತಿ ಅಧ್ಯಕ್ಷ ಆನಂದ್ ಸಾಲೇರ್,ಪೌರಾಯುಕ್ತ ಕೇಶವ ಚೌಗುಲೆ,ಸಹ ರಾಜ್ಯ ನಗರಾಭಿವೃದ್ಧಿ ಕಾರ್ಯದರ್ಶಿ ಅಜಯ ನಾಗಭೂಷಣ ಜೊತೆ ಮಹತ್ವದ ಚರ್ಚೆ ನಡೆಸಿದ್ದರು.
ಗುರುವಾರ ಶಿರಸಿ ನಗರ ಯೋಜನಾ ಅಧ್ಯಕ್ಷ ನಂದನ್ ಸಾಗರ, ಸದಸ್ಯರಾದ ಶ್ರೀನಿವಾಸ ವೆರ್ಣೇಕರ, ವಸಂತ ನೇತ್ರಕರ, ಸುಮಿತ್ರಾ ಗಂಗೊಳ್ಳಿ, ಕಾರ್ಯದರ್ಶಿ ಮನೋರಮಾ ಬೆಂಗಳೂರಿಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಜತೆ ಅಂತಿಮ ಚರ್ಚೆ ನಡೆಸಿ, ಶುಕ್ರವಾರ ಪೂರಕ ಠರಾವುಗಳನ್ನು ಸಿದ್ಧಪಡಿಸಿಕೊಂಡು ಹೋಗಿ ನಗರಾಭಿವೃದ್ಧಿ ಕಾರ್ಯದರ್ಶಿ ಅಜಯ ನಾಗಭೂಷಣ ಅವರಿಗೆ ಮಾಸ್ಟ ಪ್ಲಾನ್ ಸಲ್ಲಿಸಿದ್ದಾರೆ. ಇದೀಗ ಸರ್ಕಾರಕ್ಕೆ ಮಾಸ್ಟರ್ ಪ್ಲಾನ್ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಸ್ಪೀಕರ್. ಕಾಗೇರಿ ಪ್ರಯತ್ನದಡಿ ಶಿರಸಿ ನಗರಕ್ಕೆ ಮಾಸ್ಟರ್ ಪ್ಲಾನ್ ಬರುವುದು ಖಚಿತವಾಗಿದೆ.