ಕಾರವಾರ: ತಮ್ಮ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಜಿಲ್ಲೆಯ ಶಾಸಕರು ಹಾಗೂ ಸಚಿವರು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಅವರ ವರ್ಗಾವಣೆಗೆ ಸಂಚು ಮಾಡಿದ್ದಾರೆ. ಅನೇಕ ವರ್ಷಗಳಿಂದ ರಾಜಕೀಯ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿಯೇ ಅನೇಕ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬಿಜೆಪಿ ಸರಕಾರ ತಾಕತ್ತಿದ್ದಾರೆ ಅಂಥವರನ್ನು ವರ್ಗಾವಣೆ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಜಿಲ್ಲೆಗೆ ಸುಸ್ಥಿತಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಖ್ಯವಾಗಿರುತ್ತವೆ. ಹೊಸದಾಗಿ ಬಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ವರ್ಷವೆ ಬೇಕಾಗುತ್ತದೆ ಎಂದರು.
ಜಿಲ್ಲೆಗೆ ಬರುವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಕನಿಷ್ಠ ಐದು ವರ್ಷ ಸೇವೆ ನೀಡಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲೇ ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸುಮನ್ ಪೆನ್ನೇಕರ ಅವರ ವರ್ಗಾವಣೆಯ ವಿಷಯವನ್ನು ಹಿಂಪಡೆಯಬೇಕು. ಒಂದುವೇಳೆ ಪೆನ್ನೇಕರ ಅವರ ವರ್ಗಾವಣೆಯಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡುತ್ತೇವೆ. ಅಲ್ಲದೇ ಇದರ ಪರಿಣಾಮವನ್ನು ಬಿಜೆಪಿ ಸರಕಾರ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ನರೇಂದ್ರ ತಳೆಕಾರ, ದಾಂಡೇಲಿ ಘಟಕ ಸಾದಿಕ್, ರಾಘು, ಕುಮಟಾ ಘಟಕದ ನಾಗು ಹಳ್ಳೇರ ಇದ್ದರು.