ಹಳಿಯಾಳ: ರೈತರ ಮತ ಪಡೆದು ಆಯ್ಕೆಯಾಗುವ ಜನಪ್ರತಿನಿಧಿಗಳು ರೈತರ ಪರವಾಗಿ ನಿಂತು ಕೆಲಸ ಮಾಡಬೇಕು; ಅವರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಕಿಡಿಕಾರಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನ್ನದಾತ ರೈತ ನ್ಯಾಯಯುತ ಬೇಡಿಕೆಗಾಗಿ ಕಳೆದ 15 ದಿನಗಳಿಂದ ಬಿದಿಗೆ ಇಳಿದು ಪ್ರತಿಭಟಿಸುತ್ತಿದ್ದಾನೆ. ಹಳಿಯಾಳ ತಾಲೂಕಿನ ಕಬ್ಬು ಬೆಳೆಗಾರ ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಮಾತನಾಡಿ, ಕಾರವಾರದ ಸಭೆಯಲ್ಲಿ ರೈತರ ಯಾವೊಂದು ಬೇಡಿಕೆ ಈಡೇರಿಲ್ಲ. ಅ.15ರಂದು ಈ ಬಗ್ಗೆ ಸಕ್ಕರೆ ಸಚಿವರು, ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಅಲ್ಲಿಯೂ ಬೇಡಿಕೆ ಈಡೇರದೆ ಇದ್ದರೆ ಮತ್ತೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರವಾರದಲ್ಲಿ ಸಕ್ಕರೆ ಆಯುಕ್ತರ ಸಭೆಯಲ್ಲಿ ತಮ್ಮ ಯಾವುದೇ ಬೇಡಿಕೆ ಈಡೇರಿಲ್ಲ, 15ರ ಸಕ್ಕರೆ ಸಚಿವರ ಸಭೆಯಲ್ಲಿ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ತೆರಳಿ ಹಳಿಯಾಳ ರೈತರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ರೈತರ ಬೇಡಿಕೆ ಈಡೇರಿಸುವಲ್ಲಿ ಪ್ರಯತ್ನ ಪಡಬೇಕು ಎಂದು ಆಗ್ರಹಿಸಿದ ಅವರು, ಬೆಂಗಳೂರಿನ ಸಭೆಯಲ್ಲಿಯೂ ಬೇಡಿಕೆ ಈಡೇರದೆ ಇದ್ದರೆ ಸೋಮವಾರದ ಬಳಿಕ ಮತ್ತೆ ಸಭೆ ಸೇರಿ ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಅಲ್ಲಿಯವರೆಗೆ ಪ್ಯಾರಿ ಸಕ್ಕರೆ ಕಾರ್ಖಾನೆ ಕಾರ್ಯರಂಭ ಮಾಡದೆ ಯಥಾಸ್ಥಿತಿಯಲ್ಲಿಯೇ ಮುಂದುವರೆಯಬೇಕೆಂದು ಬೋಬಾಟಿ ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೊರೆ ಮಾತನಾಡಿ, ರೈತರ ಕಬ್ಬು ಪಡೆದು ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿನಿಂದ 8 ಸಾವಿರಕ್ಕೂ ಅಧಿಕ ಹಣ ಗಳಿಸುತ್ತಿವೆ. ಆದರೆ ರೈತರಿಗೆ 3 ಸಾವಿರ ದರ ನೀಡಲು ಮೀನಾಮೇಷ ಎನಿಸುತ್ತಿರುವುದು, ಕಾರ್ಪೋರೇಟ್ ಕಂಪೆನಿಗಳ ಪರವಾಗಿ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿರುವುದೇ ಇಂದು ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಹಿತ ರಕ್ಷಣಾ ಸಮೀತಿ ಜಿಲ್ಲಾ ಅಧ್ಯಕ್ಷ ಅಪ್ಪಾರಾವ ಪೂಜಾರಿ, ಮರಾಠಾ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ ಸೇರಿ ರಾಜ್ಯದ ಹಲವು ಮಠಾಧೀಶರು, ಸ್ವಾಮೀಜಿಗಳು ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ಕೂಡ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಕಾರಣ ನಮ್ಮ ನ್ಯಾಯಯುತ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ನಾವುಗಳು ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲವೆಂದರು.
ಗುರುವಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿತ್ತು. ರೈತ ಮುಖಂಡರಾದ ಉಡಚಪ್ಪಾ ಬೋಬಾಟಿ ಮತ್ತ ಎಸ್.ಕೆ.ಗೌಡಾ, ಯಲ್ಲಪ್ಪಾ ಮಾಲವನಕರ, ಕರವೇ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಕೃಷ್ಣಾ ಶಹಾಪುಕರ, ಅಪ್ಪಾಜಿ ಶಹಾಪುರಕರ, ಅರುಣ ಮೇತ್ರಿ, ಮಹಾದೇವ ಕೆಳೋಜಿ, ನಾರಾಯಣ ಗಾಡೆಕರ, ವಸಂತ ಸುರೇಶಿ, ಸುರೇಶ ಕೊಕಿತಕರ ಇತರರು ಇದ್ದರು.