ಕಾರವಾರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಮಂಗಳವಾರ ಇಲ್ಲಿಗೆ ಭೇಟಿ ನೀಡಿ, ವಿವಿಧೆಡೆ ಪರಿಶೀಲನೆ ನಡೆಸಿದರು.
ಗೋವಾ ಮಾರ್ಗವಾಗಿ ಕಾರವಾರಕ್ಕೆ ಭೇಟಿ ನೀಡಿದ ಅವರು, ಮೊದಲಿಗೆ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದರು. ಕಟ್ಟಡದ ಒಳಗೆಲ್ಲ ಸುತ್ತಾಡಿ, ಕಾಮಗಾರಿಗಳನ್ನ ಪರಿಶೀಲಿಸಿದರು. ನಿರ್ಮಾಣ ಗುತ್ತಿಗೆ ಪಡೆದಿರುವ ಬಿಎಸ್‌ಆರ್ ಇನ್ಫ್ರಾಟೆಕ್ ಕಂಪನಿಯ ಅಧಿಕಾರಿಗಳು ಹಾಗೂ ಜಿಲ್ಲಾ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಶಾಸಕರಿಂದ ಮಾಹಿತಿ ಪಡೆದು, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆಯವರಿಗೆ ಸೂಚಿಸಿದರು.
ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದ ಲಿಫ್ಟ್ ಉದ್ಘಾಟಿಸಿದ ಅವರು, ಹಾಸ್ಟೆಲ್‌ನ ಕೋಣೆಗಳಿಗೆ ತೆರಳಿ ಪರಿಶೀಲಿಸಿದರು. ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿನ ಚಿಕಿತ್ಸಾ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಸಿಟಿ ಸ್ಕ್ಯಾನ್ ಸೆಂಟರ್‌ಗೆ ತೆರಳಿದಾಗ ಹೊಸ ಮಶೀನನ್ನು ತೆಗೆದುಕೊಳ್ಳದೆ, ಮೂರು ವರ್ಷಗಳಿಂದ ಹಳೆಯ ಮಶೀನನ್ನೇ ಉಪಯೋಗಿಸುತ್ತಿದ್ದ ಬಗ್ಗೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಹೊಸ ಮಶೀನ್ ಪಡೆದು ರೋಗಿಗಳಿಗೆ ಅನುಕೂಲ ಮಾಡಿಕೊಡಲು ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಕ್ರಿಮ್ಸ್ ಮೇಲ್ದರ್ಜೆಗೆ, ಉನ್ನತ ವೈದ್ಯಕೀಯ ಸೇವೆ: ಡಾ.ಸುಧಾಕರ್; ಕಾರವಾರ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೇರಿಸುವ ಮೂಲಕ ಉನ್ನತ ವೈದ್ಯಕೀಯ ಸೇವೆಯನ್ನು ನೀಡಲಾಗುವುದು. ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ತಜ್ಞ ವೈದ್ಯರನ್ನು ನೇಮಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಇಲ್ಲಿ ಮಾತನಾಡಿದ ಅವರು, ಕಿದ್ವಾಯಿ, ಜಯದೇವ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯೊಂದಿಗೆ ಚರ್ಚೆ ನಡೆಸಿ ಹೆಚ್ಚಿನ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕ್ರಿಮ್ಸ್ನಲ್ಲಿ ಒಟ್ಟು 8 ಸೂಪರ್ ಸ್ಪೆಷಾಲಿಟಿ ವಿಭಾಗಗಳಲಿದ್ದು, ಏಳರಲ್ಲಿ ತಜ್ಞ ವೈದ್ಯರು ಇಲ್ಲ. ನಾವು ಈಗಾಗಲೇ ನೇಮಕಕ್ಕೆ ಹಲವು ಬಾರಿ ಅರ್ಜಿ ಆಹ್ವಾನಿಸಿದರೂ ವೈದ್ಯರು ಬರುತ್ತಿಲ್ಲ. ಈಗ ಎಂಟು ಜನರಲ್ಲಿ ಒಬ್ಬ ವೈದ್ಯರು ಬಂದಿದ್ದು, ಉಳಿದ ಏಳು ವೈದ್ಯರ ಕೊರತೆ ಇದೆ. ಇದಕ್ಕೆ ಸಹ ಕಿದ್ವಾಯಿ, ಜಯದೇವ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯೊಂದಿಗೆ ಚರ್ಚೆ ನಡೆಸಿ ವೈದ್ಯರ ನೇಮಕಕ್ಕೆ ಕ್ರಮ ತೆಗೆದುಕೊಳ್ಳುವ ಚಿಂತನೆ ಇದೆ. ಅಲ್ಲದೆ, ಕ್ರಿಮ್ಸ್ಗೆ ಎಂಆರ್‌ಐ ಮಷಿನ್, 10 ಡಯಾಲಿಸಿಸ್ ಮಷಿನ್ ಸೇರಿದಂತೆ ಇನ್ನಿತರ ಸೌಲಭ್ಯವನ್ನೂ ಸಹ ಶೀಘ್ರದಲ್ಲಿ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ವೈದ್ಯರ ಭರ್ತಿಗೆ ಕ್ರಮ: ಇನ್ನು ಕುಮಟಾದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಅನೇಕ ವೈದ್ಯರನ್ನ ಭರ್ತಿ ಮಾಡುವ ಕೆಲಸ ಮಾಡಲಾಗಿದೆ. ಜಿಲ್ಲೆಗೆ 37 ಎಂಬಿಬಿಎಸ್, 17 ತಜ್ಞ ವೈದ್ಯರನ್ನ ಕೊರೋನಾ ಸಂದರ್ಭದಲ್ಲಿ ನೀಡಲಾಗಿದೆ. ಇತ್ತೀಚಿಗೆ ನಡೆದ ಕೌನ್ಸೆಲಿಂಗ್‌ನಲ್ಲಿ 81 ಮಂದಿ ಎಂಬಿಬಿಎಸ್ ವೈದ್ಯರನ್ನ ನೇಮಕ ಮಾಡಿದ್ದು, ಈಗಾಗಲೇ ಅವರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದಿದ್ದಾರೆ.
ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರಿಲ್ಲ ಎನ್ನುವ ಪರಿಸ್ಥಿತಿಯೇ ಇಲ್ಲ. 24 ಮಂಜೂರಾದ ಸ್ಥಾನಗಳ ಪೈಕಿ 24 ವೈದ್ಯರ ನೇಮಕವಾಗಬೇಕಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದು ಅದನ್ನೂ ಸಹ ಭರ್ತಿ ಮಾಡುವ ಕೆಲಸ ಮಾಡಲಾಗುವುದು ಎಂದರು. ಹಬ್ ಎಂಡ್ ಸ್ಪೋಕ್ ಮಾಡೆಲ್ ವಿಚಾರ ಬಂದಿದೆ. ಈಗಾಗಲೇ ಇರುವಂತಹ ತಜ್ಞ ವೈದ್ಯರಿಂದ ಕಾಲಕಾಲಕ್ಕೆ ತರಬೇತಿಯನ್ನು ಕೊಡಿಸಲಾಗುವುದು. ಅಲ್ಲಿ ತರಬೇತಿ ಪಡೆದವರು ಇಲ್ಲಿಗೆ ಬಂದು ಕಡ್ಡಾಯವಾಗಿ ಸೇವೆಯನ್ನ ಮಾಡುವಂತಹ ಒಪ್ಪಂದ ಮಾಡಿಕೊಳ್ಳುವ ಕುರಿತು ಚಿಂತಿಸಲಾಗಿದೆ ಎಂದರು.