ಕಾರವಾರ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕು. ವ್ಯಕ್ತಿಗೆ ಸತತ ಪ್ರಯತ್ನದಿಂದ ಆತ್ಮವಿಶ್ವಾಸ ಬರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ನಗರದ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನೆಹರು ಯುವ ಕೇಂದ್ರದಿAದ ಆಯೋಜಿಸಿದ್ದ ಯುವ ಉತ್ಸವ- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶಗಳು ಒಮ್ಮೆಯೇ ಸಿಗುವುದಿಲ್ಲ. ಆದರೆ ಅವಕಾಶಗಳಿಗಾಗಿ ಕಾಯಬೇಕು. ಎಲ್ಲೂ ನಮ್ಮ ನಂಬಿಕೆಯನ್ನ ಕಳೆದುಕೊಳ್ಳದೇ ನಿರಂತರ ಪ್ರಯತ್ನವನ್ನ ಮಾಡಿದರೆ ಯಶಸ್ಸು ಸಾಧ್ಯವಾಗಲಿದೆ ಎಂದರು.
ಸದ್ಯ ಸಾಮಾಜಿಕ ಮಾಧ್ಯಮ ಹೆಚ್ಚು ಬೆಳೆಯುತ್ತಿದೆ. ಯುವ ಸಮುದಾದಯ ಸಾಮಾಜಿಕ ಮಾಧ್ಯಮದ ಮೇಲೆ ಅವಲಂಬಿತವಾಗಿದೆ. ಆದರೆ ಒಂದೇ ನಿರ್ಧಿಷ್ಟ ವಿಷಯವನ್ನ ಇಟ್ಟುಕೊಂಡು ಗುಂಪಾಗಿ ವರ್ತನೆ ಮಾಡುವುದು ಅಪಾಯಕಾರಿ. ಎಲ್ಲಾ ಆಯಾಮದಲ್ಲೂ ಚಿಂತನೆ ಮಾಡುವ ಅಭ್ಯಾಸವನ್ನ ಯುವಕರು ಮಾಡಬೇಕು, ಆಗ ಸಾಮಾಜಿಕ ಮಾಧ್ಯಮ ಅಪಾಯಕಾರಿಯಾಗುವುದಿಲ್ಲ ಎಂದರು.
ಪ್ರತಿ ವಿಷಯಕ್ಕೂ ವಿಭಿನ್ನ ಆಯಾಮಗಳಿರುತ್ತವೆ. ನಾವು ಪ್ರತಿ ವಿಷಯವನ್ನೂ ಆಲೋಚಿಸಿ ನಿಮ್ಮ ವೈಯಕ್ತಿಕ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಮಾಡಿದ ಕೆಲಸದಲ್ಲಿ ಪರಿಪೂರ್ಣತೆ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಬಗ್ಗೆ ಮಾತ್ರ ಯೋಚಿಸದೇ ನಮ್ಮ ಸುತ್ತಲಿನ ವ್ಯಕ್ತಿಗಳ ಬಗ್ಗೆಯೂ ಯೋಚಿಸಿದಾಗ ನಾವು ನಾಲ್ಕು ಜನರಿಗೆ ಬೇಕಾದ ವ್ಯಕ್ತಿಯಾಗಿ ಬೆಳೆಯುತ್ತೇವೆ ಎಂದರು.
ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಮಾತನಾಡಿ, ಯುವಕರು ಸಾಧನೆ ಮಾಡಲು ಗುರಿಯನ್ನ ಮುಂದಿಟ್ಟುಕೊಂಡು ಹೋಗಬೇಕು. ಯಾವುದೇ ವ್ಯಕ್ತಿಯಾಗಲಿ ದೊಡ್ಡ ಹಂತಕ್ಕೆ ಬೆಳೆದಿದ್ದಾನೆ ಎಂದರೆ ಅದರ ಹಿಂದೆ ಶ್ರಮ ಇದ್ದೇ ಇರುತ್ತದೆ. ಒಮ್ಮೆಲೇ ಪ್ರಸಿದ್ಧಿಯಾಗಬೇಕು ಎನ್ನುವುದು ತಪ್ಪು ಕಲ್ಪನೆ. ಯಾವುದೇ ಕೆಲಸವಾಗಲಿ ಶ್ರಮ ಹಾಕಿ ಮಾಡಬೇಕು. ಹಾಗೇ ಶಿಕ್ಷಣವನ್ನ ಸಹ ಶ್ರದ್ಧೆಯಿಂದ ಮಾಡಿದರೆ ಮುಂದೆ ಅವಕಾಶಗಳು ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಆರ್‌ಎಂಓ ಡಾ.ಮಂಜುನಾಥ ಭಟ್, ಮಾನಸಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ವಿಜಯರಾಜ್, ಪತ್ರಕರ್ತ ಸಂದೀಪ ಸಾಗರ, ಕರಾವಳಿ ಟ್ರೇನಿಂಗ್ ಇನ್ಸ್ಟ್ಯೂಟ್‌ನ ಆನಂದ ತಾಮಸೆ, ಉದ್ಯಮಿ ಭರತ ನೀಲಾವರ, ವಕೀಲ ಅನಿರುದ್ಧ ಹಳದೀಪುರಕರ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಯಶವಂತ ಯಾದವ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ದೀಪೇಶ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಮೊಬೈಲ್ ಫೋಟೋಗ್ರಫಿ, ಪೇಟಿಂಗ್, ಯುವ ಸಂವಾದ ಹಾಗೂ ಸಾಂಸ್ಕೃತಿ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಸಿ ಬಹುಮಾನವನ್ನ ವಿತರಿಸಲಾಯಿತು.
ತಾಯಿಯೇ ಪ್ರೇರಣೆ: ಜೀವನದಲ್ಲಿ ಏನು ಬೇಕಿದ್ದರೂ ಮಾಡು, ಆದರೆ ಅದು ಹತ್ತು ಜನರಿಗೆ ಸಹಾಯವಾಗುವಂಥ, ಅವರು ಸದಾ ನಿನ್ನನ್ನು ನೆನೆಯುವಂಥ ಕೆಲಸ ಮಾಡು ಎಂದು ನನ್ನ ತಾಯಿ ಯಾವತ್ತೂ ನನಗೆ ಕಿವಿಮಾತು ಹೇಳುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ನನಗೆ ಐಎಎಸ್ ಮಾಡಬೇಕೆಂಬ ಆಸಕ್ತಿ ಮೂಡಿತು. ಶ್ರಮಪಟ್ಟೆ, ಪತ್ರಿಕೆಗಳನ್ನ ಓದಿ ಸಮಾಜದ ಆಗುಹೋಗುಗಳನ್ನ ಅರಿತುಕೊಂಡೆ. ದೇಶದ ಬಗ್ಗೆ ಚಿಂತನೆ ಮಾಡಿದೆ. ಪ್ರತಿಫಲವಾಗಿ ಜಿಲ್ಲಾಧಿಕಾರಿಯಾಗಿ ನಿಮ್ಮ ಮುಂದೆ ಮಾತನಾಡಲು ಅವಕಾಶ ಸಿಕ್ಕಿದೆ ಎಂದು ಮುಗಿಲನ್ ಅವರು ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿ ಯುವಕರಿಗೆ ಸ್ಫೂರ್ತಿ ತುಂಬಿದರು.