ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಮುಖವಾಗಿ ಎಸ್‌ಟಿ ಸಮುದಾಯಕ್ಕೆ ಈಗ ಶೇ 3ರಷ್ಟಿರುವ ಮೀಸಲಾತಿಯನ್ನು ಶೇ 7ಕ್ಕೆ ಏರಿಕೆ ಮಾಡಲು ಸರ್ವಪಕ್ಷ ಸಭೆಯಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.
ಸರ್ವ ಪಕ್ಷ ಸಭೆ ಬಳಿಕ ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ, ನ್ಯಾ.ನಾಗಮೋಹನ್ ದಾಸ್ ವರದಿ ಬಗ್ಗೆ ಚರ್ಚೆ ಮಾಡಿದ್ದೇವೆ. ಎಸ್‌ಸಿ 15ರಿಂದ 17ಕ್ಕೆ ಹೆಚ್ಚಳ, ಎಸ್‌ಟಿ 3ರಿಂದ 7ಕ್ಕೆ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ವರದಿಗೆ ಅವಧಿಯ ವಿಸ್ತರಣೆಯನ್ನು ನಾವೇ ಮಾಡಿದ್ದೇವೆ. ವರದಿ ಬಳಿಕ ಸುಪ್ರೀಂಕೋರ್ಟ್ ಕೆಲ ತೀರ್ಪು ಬಂತು, ಇಂದಿರಾ ಸಹಾನಿ ಕೇಸ್ ಅನ್ವಯ ಯಾವ ರೀತಿ ಮಾಡಬೇಕೆಂದು 7 ಶಿಫಾರಸನ್ನು ನಾಗಮೋಹನ್ ದಾಸ್ ವರದಿ ನೀಡಿದೆ. ಈ ವಿಚಾರವಾಗಿ ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರ ಇರುವುದರಿಂದ ಕೆಲ ತೀರ್ಮಾನ ಮಾಡಿದ್ದೇವೆ ಎಂದರು.
ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಶನಿವಾರವೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ ಮಾಡುತ್ತೇವೆ. ಈಗಿರುವ ಯಾವುದೇ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡುವುದಿಲ್ಲ. ನಾಗಮೋಹನ್ ದಾಸ್ ವರದಿಯಂತೆ ಶೇ 50ಕ್ಕಿಂತ ಮೇಲೆ ಇರುವುದು ಆ ರೀತಿ ಮಾಡುತ್ತೇವೆ. ಇನ್ನು ಹಲವು ಸಮುದಾಯದ ಬೇಡಿಕೆ ಇದೆ, ಎಲ್ಲದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದರು. ಸಮುದಾಯದ ಒಳಗೆ ಇರುವವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ ಎಂಬ ಕೂಗು ಇದೆ. ಅದಕ್ಕೂ ಕೂಡ ಎಲ್ಲರ ಜೊತೆ ಚರ್ಚೆ ಮಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡದೆ ಅಂತಿಮ ತೀರ್ಮಾನ ಮಾಡುತ್ತೇವೆ. ಎಸ್ಟಿ ಎಸ್ಸಿ ಒಳಸಮುದಾಯದ ಮೀಸಲಾತಿಯ ಬಗ್ಗೆಯೂ ನ್ಯಾಯಸಮ್ಮತವಾಗಿ ಮಾಡುತ್ತೇವೆ ಎಂದು ತಿಳಿಸಿದರು.