ಸಿದ್ದಾಪುರ: ಕಾಡುಕೋಣ ಹಾಗೂ ಕಾಡೆಮ್ಮೆಗಳು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ತಾಲೂಕಿನ ತ್ಯಾರ್ಸಿಯ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ಎರಡ್ಮೂರು ವರ್ಷಗಳಿಂದ ಕಾಡುಕೋಣಗಳು ಭತ್ತದ ಗದ್ದೆಗಳಿಗೆ ಧಾವಿಸಿ ಬೆಳೆ ನಾಶ ಮಾಡುತ್ತಿದ್ದು, ಈ ಬಾರಿ ಕಾಡುಕೋಣಗಳ ಹಾವಳಿ ಮಿತಿ ಮೀರಿದೆ. ಭತ್ತದ ಪೈರು ತೆನೆಕಟ್ಟುತ್ತಿರುವ ಸಂದರ್ಭದಲ್ಲಿ ಪ್ರಾಣಿಗಳು ತಿಂದು ಹಾಳು ಮಾಡುತ್ತಿರುವುದರಿಂದ ವರ್ಷದ ತುತ್ತಿನ ಕೂಳಿಗೆ ಬರೆ ಬೀಳಲಿದೆ. ತ್ಯಾರ್ಸಿಯಲ್ಲಿರುವ ಎಲ್ಲಾ ರೈತರು ಅರ್ಧ ಎಕರೆ ಹಾಗೂ ಒಂದರಿಂದ ಎರಡು ಎಕರೆಯೊಳಗಿನ ಜಮೀನನ್ನು ಹೊಂದಿರುವ ಸಣ್ಣ ಹಿಡುವಳಿದಾರರಾಗಿದ್ದಾರೆ. ಊಟಕ್ಕೆ ಭತ್ತ ಬಿಟ್ಟರೆ ಉಳಿದ ದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಉಣ್ಣುವ ಅನ್ನಕ್ಕೂ ಸಹ ಕಾಡುಪ್ರಾಣಿಗಳು ಕುತ್ತು ತರುತ್ತಿವೆ. ರೈತರಿಗಾದ ಬೆಳೆ ನಷ್ಟಕ್ಕೆ ಯೋಗ್ಯ ಪರಿಹಾರ ನೀಡುವ ಜತೆಗೆ ಐಬೆಕ್ಸ್ ಬೇಲಿಯನ್ನು ಇಲಾಖೆಯ ವತಿಯಿಂದ ಮಾಡಿ ಕೊಡುವುದರ ಮೂಲಕ ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚ್ಚಳ್ಳಿ, ತ್ಯಾರ್ಸಿ ಭಾಗದಲ್ಲಿ ಇಲಾಖೆಯ ಗಸ್ತು ವಾಹನ ಹಾಗೂ ಸಿಬ್ಬಂದಿಗಳನ್ನು ಕಳುಹಿಸಿ ಕಾಡುಪ್ರಾಣಿ ಬೆದರಿಸಲಾಗುವುದು. ರೈತರಿಗೆ ಐಬೆಕ್ಸ್ ಬೇಲಿ ಸಂಪೂರ್ಣ ಉಚಿತವಾಗಿ ಮಾಡಿ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ವೇಳೆ ತ್ಯಾರ್ಸಿ ಗ್ರಾಮದ ಮುಖ್ಯಸ್ಥ ಮಾರುತಿ ನಾಯ್ಕ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಕಮಲಾಕರ ಗೊಂಡ ಹಾಗೂ ದ್ಯಾವಾ ಗೊಂಡ ಉಪಸ್ಥಿತರಿದ್ದರು.