ಕುಮಟಾ: ಬಿಜೆಪಿ ಹಿಂದಿನಿಂದಲೂ ಕೋಮುಸೌಹಾರ್ದತೆ ಕೆಡಿಸುವುದು, ಸಮಾಜದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ಹೆಣದ ಮೇಲೆ ರಾಜಕಾರಣ ಮಾಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಶಾಸಕರಿಗೆ ನಾಚಿಕೆ, ಮಾನ ಇದ್ದರೆ ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಸವಾಲೆಸೆದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರದ ಪರೇಶ್ ಮೇಸ್ತಾನ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ಸಲ್ಲಿಸಿದೆ. ಈ ಮೂಲಕ ಪ್ರಕರಣ ಕೊಲೆಯಲ್ಲ. ಆಕಸ್ಮಿಕ ಸಾವು ಎಂಬುದು ದೃಢಪಟ್ಟಂತಾಗಿದೆ. ಅಲ್ಲದೇ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಸಿಬಿಐ ತನಿಖೆಯಲ್ಲಿ ದೃಢಪಟ್ಟ ವರದಿಯಿಂದಲೆ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ. ಪರೇಶನ ಸಾವು ಆದಾಗ ಬಿಜೆಪಿಗರು ಇದು ಕೊಲೆ ಎಂದು ಬಿಂಬಿಸಿದ್ದರು. ತಾವೆ ಸೃಷ್ಟಿಸಿದ ಸುಳ್ಳಿಗೆ ರೆಕ್ಕೆ-ಪುಕ್ಕ ಕಟ್ಟಿ ರಾಜಕೀಯಕ್ಕೆ ಬಳಸಿಕೊಂಡು ಇಡೀ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ. ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಸಾಧ್ಯವಾಗದೆ ಇಂಥ ವಾಮ ಮಾರ್ಗದ ಹಾದಿ ತುಳಿದಿರುವುದು ನಾಚಿಕೆ ಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಪರೇಶ ಮೇಸ್ತ 2017 ಡಿ.6 ರಂದು ನಾಪತ್ತೆಯಾಗಿದ್ದು, ಡಿ.7 ರಂದು ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆ ಸಮಯದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಜಿಲ್ಲೆಗೆ ಆಗಮಿಸಿದ್ದರು. ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ಶವ ಸಂಸ್ಕಾರಕ್ಕೂ ಆತನ ಕುಟುಂಬಕ್ಕೆ ಆಸ್ಪದ ನೀಡದೇ, ಕುಮಟಾ, ಭಟ್ಕಳ, ಕಾರವಾರ ಹಾಗೂ ಶಿರಸಿಯಲ್ಲಿ ಕೊಮು ಗಲಭೆ ಸೃಷ್ಟಿಸಿ, ಸರ್ಕಾರಿ ಆಸ್ತಿ-ಪಾಸ್ತಿ, ಅಂಗಡಿ ಮುಂಗಟ್ಟುಗಳಿಗೆ ಹಾನಿ ಮಾಡಿತ್ತು. ಇದರಿಂದ 4 ಸಾವಿರಕ್ಕೂ ಅಧಿಕ ಅಮಾಯಕ ಹಿಂದೂ ಯುವಕರು ಪ್ರಕರಣ ದಾಖಲಿಸಿಕೊಂಡು ತೊಂದರೆ ಅನುಭವಿಸಿದ್ದರು. ಆ ಸಮಯದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಈಗ ಗೆದ್ದು ಬಂದ ಶಾಸಕರು ಪ್ರಚೋದನಾಕಾರಿ ಹೇಳಿಕೆ ನೀಡಿ, ಗೊಂದಲ ಸೃಷ್ಟಿ ಮಾಡಿದ್ದರು. ಕುಮಟಾದಲ್ಲಿ ಐಜಿಪಿ ಅವರ ಕಾರನ್ನು ಸುಡಲಾಯಿತು. ಈ ಎಲ್ಲ ಘಟನೆಗಳಿಗೂ ಬಿಜೆಪಿ ನೇರ ಹೊಣೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ಭಾಸ್ಕರ ಪಟಗಾರ, ನಾಗೇಶ ನಾಯ್ಕ ಮಾತನಾಡಿ, ಪರೇಶ ಮೇಸ್ತ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಬಿಜೆಪಿಯು ಅಸ್ತ್ರವಾಗಿ ಬಳಸಿಕೊಂಡಿದೆ. ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ ಮಾಡಿತ್ತು. ಪ್ರಕರಣ ತೀವೃ ಸ್ವರೂಪ ಪಡೆದುಕೊಂಡು ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ವ್ಯಾಪಿಸಿ ಅನೇಕ ಘಟನೆಗಳಿಗೆ ಕಾರಣವಾಯಿತು. ತನಿಖೆ ನಡೆಸಿದ ಸಿಬಿಐ ಇದು ಕೊಲೆಯಲ್ಲಿ ಆಕಸ್ಮಿಕ ಸಾವು ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಇದರಿಂದ ಸತ್ಯಾಸತ್ಯತೆ ಹೊರ ಬಂದಿದೆ. ಶಾರದಾ ಶೆಟ್ಟಿ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ವಿನಂತಿಯAತೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 4.5 ವರ್ಷದ ನಂತರ ವರದಿ ಸಲ್ಲಿಸಿದೆ. ಇದರಿಂದ ಜನರ ಗೊಂದಲ ಬಗೆಹರಿದಿದೆ. ಕರಾವಳಿ ಭಾಗದ 18 ಶಾಸಕರ ಸೋಲಿಗೆ ಈ ಪ್ರಕರಣ ಕಾರಣವಾಗಿತ್ತು. ಅಲ್ಲದೇ ಕೋಟಿ ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದ ಶಾರದಾ ಶೆಟ್ಟಿ ಅವರ ಸೋಲಿಗೂ ಇದೇ ಕಾರಣವಾಗಿತ್ತು. 50 ಸಾವಿರ ಮತಗಳ ಅಂತದಿAದ ಗೆದ್ದಿದ್ದೇನೆ ಎಂದು ಹೇಳುವ ಶಾಸಕ ದಿನಕರ ಶೆಟ್ಟಿ ತಾಕತ್ತಿದ್ದರೆ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಲಿ, ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೊಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿಕುಮಾರ ಶೆಟ್ಟಿ, ಮಧುಸೂದನ ಶೆಟ್, ಆರ್ ಎಚ್ ನಾಯ್ಕ, ಮುಜಾಫರ್ ಶೇಖ್, ನಾರಾಯಣ ನಾಯ್ಕ, ಜಗದೀಶ ಹರಿಕಂತ್ರ, ಹನುಮಂತ ಪಟಗಾರ, ಸುರೇಖಾ ವಾರೇಕರ ಇತರರಿದ್ದರು.