ಯಲ್ಲಾಪುರ: ಪಟ್ಟಣದ ಟಿ.ಎಂ.ಎಸ್.ಸಭಾಭವನದಲ್ಲಿ ಗುರುವಾರ ಅಡಿಕೆ ಆಮದು ವಿರೋಧಿಸಿ ಟಿ.ಎಂಎಸ್ ಅಧ್ಯಕ್ಷ ಎನ್.ಕೆ. ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಭೂತಾನ್ ಅಡಿಕೆ ಆಮದಿನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಬೆಳೆಗಾರರು ಇನ್ನಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ರಾಜ್ಯ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಆಮದಿಗೆ ನಿಯಂತ್ರಣ ಹೇರಲು ನಿಯೋಗದ ಮೂಲಕ ಸರಕಾರಕ್ಕೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು.
ಮೊದಲು ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿಮಾಡಿ ಸಂಕಷ್ಟದ ಪರಿಮಾರ್ಜನೆಗೆ ಮಾರ್ಗೋಪಾಯ ರೂಪಿಸುವುದು. ಅಡಿಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು, ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವರಿಕೆ ಮಾಡಿಕೊಟ್ಟು ಸಿ.ಎಂ ಬೊಮ್ಮಾಯಿ ಅವರ ಭೇಟಿ ಮಾಡುವುದು, ನಂತರ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು.
ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಮಾತನಾಡಿ “ಕರ್ನಾಟಕದ ಅರ್ಧ ರಾಜ್ಯದಲ್ಲಿ ಅಡಿಕೆ ಬೆಳೆಯುತ್ತಿದ್ದು, ಎಲ್ಲರನ್ನು ಒಳಗೊಂಡು ಸರಕಾರದ ಮೇಲೆ ಒತ್ತಡ ತರಬೇಕು” ಎಂದರು.
ಪ್ರಮುಖರಾದ ಪಿ.ಜಿ.ಭಟ್ ಬರಗದ್ದೆ, ನರಸಿಂಹ ಕೋಣೆಮನೆ, ಗೋಪಾಲಕೃಷ್ಣ ಗಾಂವ್ಕಾರ, ರವಿ ಹೆಗಡೆ ಕನೇನಹಳ್ಳಿ, ಬಿ.ಜಿ.ಹೆಗಡೆ ಗೇರಾಳ, ವೆಂಕಟ್ರಮಣ ಬೆಳ್ಳಿ ಮುಂತಾದವರು ಇದ್ದರು.