ಕುಮಟಾ: ಕಳೆದ ನಾಲ್ಕೂವರೆ ವರ್ಷದ ಹಿಂದೆ ಹೊನ್ನಾವರದಲ್ಲಿ ಸಾವನ್ನಪ್ಪಿದ್ದ ಪರೇಶ ಮೇಸ್ತಾನದ್ದು ಕೊಲೆ ಎಂದು ಅಂದು ಬಿಜೆಪಿಗರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ಇದು ಕೊಲೆ ಅಲ್ಲ; ಸಹಜ ಸಾವು ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಹೀಗಾಗಿ ಮೇಸ್ತಾ ಸಾವನ್ನ ರಾಜಕೀಯವಾಗಿ ಬಳಸಿಕೊಂಡು ಶಾಸಕರಾಗಿರುವ ಬಿಜೆಪಿಗರು ಜನರ ಕ್ಷಮೆ ಕೇಳಬೇಕು ಎಂದು ಕುಮಟಾ- ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್.ನಾಯ್ಕ ಆಗ್ರಹಿಸಿದ್ದಾರೆ.
ಪರೇಶ ಮೇಸ್ತಾ ಸಾವನ್ನಪ್ಪಿದ ಆರಂಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನಮ್ಮ ಪಕ್ಷದ ಸಿದ್ದರಾಮಯ್ಯ ಅವರು ಪ್ರಕರಣವನ್ನ ಸಿಓಡಿಗೆ ನೀಡಿದ್ದರು. ನಂತರ ಇದೇ ಬಿಜೆಪಿಯ ಸ್ಥಳೀಯ ಹಾಗೂ ರಾಜ್ಯದ ನಾಯಕರು ತಮಗೆ ಸಿಓಡಿ ಮೇಲೆ ವಿಶ್ವಾಸವಿಲ್ಲ, ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಪ್ರಕರಣವನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಆದರೆ ಅಂದು ಸಿಓಡಿ ತನಿಖೆ ಬೇಡ, ಸಿಬಿಐ ತನಿಖೆ ಬೇಕು, ಅವರ ಮೇಲೆ ವಿಶ್ವಾಸ ಇದೆ ಎಂದು ಹೇಳಿದ್ದ ಬಿಜೆಪಿಯ ಪಕ್ಷದ ನಾಯಕರು ಇಂದು ಸಿಬಿಐ ವರದಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ನಿಜವಾಗಲು ಮಾನ- ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಇವರಿಗೆ ಬಡವರ ಹೆಣದ ಮೇಲೆ ಅಧಿಕಾರ ಅನುಭವಿಸಿ ರುಚಿ ಸಿಕ್ಕಿದೆ. ಹೀಗಾಗಿ ಈ ಎಲ್ಲಾ ನಾಟಕ ಮಾಡುವುದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಪರ ಕಾಳಜಿ ಈ ಬಿಪಿಗರಿಗೆ ಇಲ್ಲ. ಈಗಾಗಲೆ ಇವರ ಬಣ್ಣ ಬಯಲಾಗಿದೆ. ಅಂದು ಕೂಗಾಡಿ, ಚೀರಾಡಿ ಅಧಿಕಾರಕ್ಕೆ ಬಂದವರು ಇಂದು ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಮತ್ತೆ ಮತ್ತೆ ಸುಳ್ಳನ್ನೆ ಸತ್ಯ ಮಾಡಲು ಸಾಧ್ಯವಿಲ್ಲ ಎನ್ನುವುದು ಅವರಿಗೂ ಗೊತ್ತಾಗಿದೆ. ನಿಮ್ಮ ಅಧಿಕಾರ ಇನ್ನೂ ಕೆಲ ತಿಂಗಳಿದೆ. ಇಲ್ಲಿಯವರಗೆ ಸಮಾಜದಲ್ಲಿ ಅಶಾಂತಿ ಮಾಡಿದ್ದು, ಸಾಕು ಇರುವ ತಿಂಗಳ ಕಾಲವಾದರೂ ಬಡವರ ಕೆಲಸ ಮಾಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
ಮೇಸ್ತಾ ಸಾವನ್ನಪ್ಪಿದ ಸಂದರ್ಭದಲ್ಲಿ ಅಮಿತ್ ಶಾ ಅವರ ಮನೆಗೆ ಬಂದು ಹೋಗಿದ್ದಾರೆ. ಬಂದಾಗ ಒಂದು ರೂಪಾಯಿ ಸಹಾಯ ಮಾಡದೆ ತನಗೆ ಚಳಿಜ್ವರ ಎಂದು ಎರಡು ನಿಮಿಷದ ಭೇಟಿ ಮಾಡಿ ಮಾಧ್ಯಮದ ಎದುರು ಪೋಸ್ ಕೊಟ್ಟು ಹೋಗಿದ್ದಾರೆ. ಅದೇ ಅಮಿತ್ ಶಾ ಈಗ ಕೇಂದ್ರದ ಗೃಹ ಖಾತೆ ಹೊಂದಿದ್ದಾರೆ. ಸಿಬಿಐ ತಂಡ ಮೇಸ್ತಾ ವರದಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತರದೆ ನ್ಯಾಯಾಲಯಕ್ಕೆ ನೀಡಿದೆಯಾ…? ಅಥವಾ ಇವೆಲ್ಲಾ ಅವರ್ಯಾರಿಗೂ ಗೊತ್ತಿಲ್ಲವಾ? ಎಲ್ಲರಿಗೂ ಇದು ಗೊತ್ತಿರುವ ವಿಚಾರವೆ. ಆದರೂ ಸಹ ಬಿಜೆಪಿಗರು ಇನ್ನೂ ನಾಟಕ ಮುಂದುವರೆಸಿದ್ದಾರೆ ಎಂದಿದ್ದಾರೆ.
ಕೋಮುಗಲಭೆಯಲ್ಲಿ ಉಂಟಾಗಿದ್ದ ಹಾನಿಗೆ ಪರಿಹಾರ ನೀಡಲಿ: ಪರೇಶ ಮೇಸ್ತಾ ಸಾವಿನ ನಂತರದಲ್ಲಿ ಜಿಲ್ಲೆಯಲ್ಲಿ ಗಲಭೆ ಉಂಟಾಗಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಆಸ್ತಿ- ಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಸರಕಾರ ಹಾನಿಗೆ ಒಳಗಾದವರಿಗೆ ಪರಿಹಾರ ನೀಡುವ ಬಗ್ಗೆ ಮುಂದಾಗಬೇಕು. ಈ ಘಟನೆಯಲ್ಲಿ ಅದೆಷ್ಟೋ ಅಮಾಯಕ ಹಿಂದೂ ಯುವಕರು ಅನಾವಶ್ಯಕವಾಗಿ ನ್ಯಾಯಾಲಯಕ್ಕೆ ಅಲೆದಾಡಬೇಕಾಗಿ ಬಂತು. ಅವರಿಗೆಲ್ಲ ಸರಕಾರ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಮಂಜುನಾಥ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.