ಶಿರಸಿ: ತಾಲೂಕಿನ ಬಿಳೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಯುನಿಯನ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಯಕ್ಷಗಾನದ ಬಾಲ ಪ್ರತಿಭೆ ತುಳಸಿ ಹೆಗಡೆ ದೀಪ ಹಚ್ಚಿ, ಯಕ್ಷಗಾನದ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ನಾಗರಾಜ ಗಾಂವ್ಕರ್ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಅದಕ್ಕೆ ನೀರೆರೆದು ಪ್ರೋತ್ಸಾಹಿಸುವ ಕೆಲಸ ಆಗಬೇಕು.ಪ್ರತಿಭೆ ವಿಕಸನಗೊಂಡಾಗ ಬೆಳಕಿಗೆ ಬರುತ್ತದೆ. ಇದಕ್ಕೆ ಶಿಕ್ಷಕರ, ಪಾಲಕರ, ಸಮಾಜದ ಪ್ರೇರಣೆ ಬೇಕು. ಎಲ್ಲರಲ್ಲೂ ಇರುವ ಪ್ರತಿಭೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತುಳಸಿ ಹೆಗಡೆ, ಕಲೆಯನ್ನು ನಂಬಿದರೆ ನೋವಾಗುವದಿಲ್ಲ, ಬೆಳೆಯುತ್ತೇವೆ. ಈ ಕಾಲೇಜಿನ ಸಂಸತ್ತು ಕಲೆ, ಕ್ರೀಡೆ, ಸಾಹಿತ್ಯಕ್ಕೆ ವೇದಿಕೆ ಆಗಲಿ. ಇರುವೆಯಾಗಿ ನಮ್ಮ ಕೆಲಸ ಮಾಡುತ್ತ ಭಗವಂತನಿಗೆ ಫಲ ಬಿಟ್ಟು ಮುಂದೆ ಹೋದರೆ ಫಲ ಕೂಡ ಅರಸಿ ಬರುತ್ತವೆ ಎಂದರು.
ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, ಅಡ್ಡದಾರಿ ಹಿಡಿಯಲು ಮೂರು ಸೆಕೆಂಡ್ ಸಾಕು. ವಿದ್ಯಾರ್ಥಿ ಬದುಕಿಗೆ ಸಾಧನೆ ಆಗಬೇಕಿದೆ ಎಂದರು.
ಅತಿಥಿಗಳಾಗಿ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೇಶವ ನಾಯ್ಕ ,ಪ್ರಭಾವತಿ ಹೆಗಡೆ, ದೇವರಾಜ ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶುಭಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಉಮೇಶ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ನಾತನಾಡಿದರು. ಉಪನ್ಯಾಸಕ ಶ್ರೀಕೃಷ್ಣ ಹೆಗಡೆ ವಂದಿಸಿದರು. ಉಪನ್ಯಾಸಕಿ ವಿಜಯಾ. ಜಿ. ನಿರ್ವಹಿಸಿದರು. ಚಂದ್ರಶೇಖರ ಕುಮಸಿ ಪ್ರತಿಜ್ಞಾ ವಿಧಿ ಬೊಧಿಸಿದರು. ಕಾಲೇಜ್ ನೂತನ ಸಂಸತ್ತಿನ ಸದಸ್ಯರುಗಳಾದ ಶಶಾಂಕ ಜೋಗಿ, ಸುಜಾತ ನಾಯ್ಕ ,ರವಿ ಗೌಡ, ಪಲ್ಲವಿ ಕುರಬರ, ಮನೀಷ ನಾಯ್ಕ, ಹೇಮಾ ಗೌಡ, ವಂದನಾ ನಾಯ್ಕ ಇವರು ಪ್ರಮಾಣ ವಚನ ಸ್ವೀಕರಿಸಿದರು.