ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ವ್ಯಕ್ತಿಗಳ ಮೇಲೆ ದೌರ್ಜನ್ಯ ನಡೆಸಿದ ಹಾಗೂ ದೌರ್ಜನ್ಯ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿರುವ ಹಾಗೂ ದೌರ್ಜನ್ಯದಲ್ಲಿ ಕೊಲೆ, ಅತ್ಯಾಚಾರ, ಗಂಭೀರ ಸ್ವರೂಪದ ಅಪರಾಧಗಳ ಪ್ರಕರಣಗಳ ತನಿಖೆ ಯಾವ ಹಂತದಲ್ಲಿವೆ ಎಂಬ ಖಚಿತ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ್ ಅವರಿಗೆ ನಿರ್ದೇಶಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಜನಾಂಗದ ಮೇಲೆ ದೌರ್ಜನ್ಯವೆಸಗಿದವರ ಮೇಲೆ ದಾಖಲಿಸಲಾದ ಪ್ರಕರಣಗಳ ಕುರಿತು ಸ್ಪಷ್ಟ ನಿಖರ ಮಾಹಿತಿ ನೀಡಬೇಕು. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ, ಚಾರ್ಜ್ಶೀಟ್ ಸಲ್ಲಿಸದೇ ಬಾಕಿಯಿರುವ ಘಟನೆಗಳ ಕುರಿತು ಹಾಗೂ ಇಂತಹ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿಯ ಸಭೆಗೆ ಬರುವ ಪೂರ್ವದಲ್ಲಿಯೇ ತಿಳಿಸಬೇಕು. ಅಗತ್ಯ ಮಾಹಿತಿ ಲಭ್ಯವಿದ್ದಾಗ ಮಾತ್ರ ದೌರ್ಜನ್ಯದಿಂದ ಪೀಡಿತರಾದವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಾತಿ ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಖಚಿತ ಮಾಹಿತಿ ಒದಗಿಸಬೇಕು. ಪ್ರತಿ ತಿಂಗಳಲ್ಲಿ ಒಂದು ದಿನ ಸ್ಥಳೀಯ ಮಟ್ಟದಲ್ಲಿ ಕುಂದು ಕೊರತೆ ಸಭೆಯನ್ನು ಏರ್ಪಡಿಸಿ ನೊಂದವರಿಗೆ ಕಾನೂನಿನ ನೆರವು ಸದಾ ಇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆ ಮೂಲಕ ಸ್ಥಳೀಯವಾಗಿ ಯೋಜನೆಯ ರೂಪುರೇಷೆಯನ್ನು ತಯಾರಿಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಇಲಾಖೆಯ ಸುತ್ತೋಲೆಗೆ ತಿದ್ದುಪಡಿ ತಂದು ಸರಕಾರಿ ಜಾಗೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಮೂಲಕ ಬೇರೆ ಬೇರೆ ಯೋಜನೆಯ ಹಾಕಿಕೊಳ್ಳುವ ಮೂಲಕ ಪರಿಶಿಷ್ಟ ಜಾತಿ, ವರ್ಗದ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ ನಗರಸಭೆಯಿಂದ ಕೈಗೊಳ್ಳಲಾದ ಕಾಮಗಾರಿಗಳು ಪೂರ್ಣಗೊಂಡರೂ ಸಹ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೇ ಇರುವುದರಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಜಿಲ್ಲಾ ಡಿಎಸ್ಎಸ್ ಅಧ್ಯಕ್ಷ ಹಾಗೂ ದೌರ್ಜನ್ಯ ವಿರೋಧಿ ಸಮಿತಿಯ ಸದಸ್ಯ ದೀಪಕ್ ಕುಡಾಳ್ಕರ್ ಹಾಗೂ ವಿವಿಧ ಸಂಘಸAಸ್ಥೆಗಳ ಸದಸ್ಯರು ಇದ್ದರು.