ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸಂಘದ ಅಧ್ಯಕ್ಷ ಶ್ರೀಧರ ಮಂಜುನಾಥ ಭಟ್ಟ ಮಾಣಿಕ್ನಮನೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ತಾಲೂಕು ವಿಸ್ತರಣಾಧಿಕಾರಿ, ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಪ್ರತಿಯೊಬ್ಬ ಶೇರುದಾರ ಸದಸ್ಯರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯರಾಗಿ ಸಂಘದ ಪ್ರಯೋಜನ ಪಡೆದುಕೊಳ್ಳಿ. ಜಾನುವಾರುಗಳಿಗೆ ಇನ್ಸುರೆನ್ಸ್ ಮಾಡಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ತಿಳಿಸಿದರು.
ಸಂಘವು ಪ್ರಸಕ್ತ ಸಾಲಿನಲ್ಲಿ 36ಸಾವಿರದಷ್ಟು ನಿವ್ವಳ ಲಾಭ ಹೊಂದಿದೆ. ಶೇರುದಾರ ಸದಸ್ಯರಿಗೆ ಸಂಘದ ಮೂಲಕವೇ ಹಣವನ್ನು ನೀಡಿ ಕಲ್ಯಾಣ ಸಂಘದ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀಧರ ಎಂ.ಭಟ್ಟ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಬಹುಮಾನ ನೀಡಲಾಯಿತು ಹಾಗೂ 2021-22ನೇ ಸಾಲಿನಲ್ಲಿ ಸಂಘಕ್ಕೆ ಹಾಲು ನೀಡಿದ ಎಲ್ಲ ಹಾಲು ಉತ್ಪಾದಕರಿಗೂ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹುಬ್ಬಗೈ ಹಾಗೂ ಆಡಳಿತ ಮಂಡಳಿ ಸದಸ್ಯರು, ಹಾಲು ಉತ್ಪಾದಕರು ಉಪಸ್ಥಿತರಿದ್ದು ಸಂಘದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ರಮೇಶ ಹೆಗಡೆ ಹಾರ್ಸಿಮನೆ ವಾರ್ಷಿಕ ವರದಿ ವಾಚಿಸಿದರು. ಸಂಘದ ಹಾಲು ಪರೀಕ್ಷಕ ಪ್ರಮೋದ ಕೊಡಿಯಾ ಸಹಕರಿಸಿದರು.