ಭಟ್ಕಳ: ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಇಲ್ಲಿನ ಪಿಎಫ್ಐ ಕಾರ್ಯಕರ್ತರು ಪ್ರವಾಸಿ ಮಂದಿರದ ಎದುರು ಪ್ರತಿಭಟನೆ ನಡೆಸಿದರು.
ದೇಶದಾದ್ಯಂತ 10 ರಾಜ್ಯಗಳಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಪಿಎಫ್ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಬೆಹಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇವೇಳೆ ಏಕಾಏಕಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆಯಲು ಪ್ರಯತ್ನಿಸಿದರು. ಆದರೆ ಪೊಲೀಸರು ಕಾರ್ಯಕರ್ತರನ್ನು ತಡೆದು, ರಸ್ತೆ ತಡೆದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರಿಗೂ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳದಲ್ಲಿ ಸಿಪಿಐ ದಿವಾಕರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಪಿಎಫ್ಐನ ಅಬ್ದುಲ್ ಜಮಾನ್ ಬೆಂಗಾಲಿ, ತನ್ವೀರ್, ಅಕೀಫ್, ಹೊನ್ನಾವರದ ಮಕಸೂದ್ ಮುಂತಾದವರಿದ್ದರು.
ಹೆದ್ದಾರಿ ತಡೆಯಲು ಮುಂದಾದಕ್ಕೆ ಪೊಲೀಸರು ತಡೆ ಒಡ್ಡಿದ್ದಕ್ಕೆ ಆಕ್ರೋಶಗೊಂಡ ಪಿಎಫ್ಐ ಕಾರ್ಯಕರ್ತರು, ಗೋ ಬ್ಯಾಕ್ ಗೋ ಬ್ಯಾಕ್… ಎನ್ಐಎ ಗೋ ಬ್ಯಾಕ್…, ಹೇಡಿ ಸಾವರ್ಕರ್ ಮಕ್ಕಳು… ಸೇರಿದಂತೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಮಿತ್ ಶಾ, ಆರ್ಎಸ್ಎಸ್, ಸಂಘ ಪರಿವಾರಕ್ಕೆ ಮುರ್ದಾಬಾದ್ ಘೋಷಣೆ ಕೂಗಿದರು. ‘ತಬ್ ಗವರ್ನಮೆಂಟ್ ಡರ್ ಥೇ ಹೈ ತಬ್ ಎನ್ಐಎ ಸಾಮ್ನೇ ಆಥೆ ಹೈ’ ಎಂದು ಕೂಗಿದರು. ಜೊತೆಗೆ ದೇಶಕ್ಕಾಗಿ ಪಿಎಫ್ಐ ಹೂವಿನಂತೆ, ಆರ್ಎಸ್ಎಸ್ನವರಿಗೆ ಬೆಂಕಿಯಂತೆ ಎಂದು ಘೋಷಣೆ ಕೂಗಿದರು.