ಭಟ್ಕಳ: ಇಲ್ಲಿನ ಪುರಸಭೆಯಲ್ಲಿ ಒಂದರ ಮೇಲೊಂದು ಅವಘಡಗಳು ಸಂಭವಿಸಲು ಮತ್ತು ನಿರಂತರವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಲು ಪುರಸಭೆಯ ತಪ್ಪು ನಿರ್ಧಾರವೇ ಕಾರಣ ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಧಾರಿ ಸಮಾಜದ ದ್ವಾರ ಮಂಟಪ ವಿಚಾರವಾಗಿ ನಾಮಧಾರಿ ಸಮಾಜದ ಅಧ್ಯಕ್ಷರು ದ್ವಾರ ಮಂಟಪ ನಿರ್ಮಾಣದ ಕುರಿತು ಪುರಸಭೆಗೆ ಕಳೆದ ಐದು ತಿಂಗಳ ಹಿಂದೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಅಥವಾ ಹಿಂಬರಹ ಬಂದಿಲ್ಲ. ಆ ಪತ್ರದ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿಲ್ಲ. ಆದರೆ ಈಗ ದ್ವಾರ ಮಂಟಪದ ಕಾಮಗಾರಿ ಆರಂಭವಾಗುತ್ತಿದಂತೆ ಪುರಸಭೆಯ ಕೆಲ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ಒಂದು ಕೋಮಿನ ಸದಸ್ಯರು ಮಾತ್ರ ಸಭೆ ನಡೆಸಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ ದ್ವಾರಮಂಟಪದ ವಿಚಾರವಾಗಿ ಸೆಪ್ಟೆಂಬರ್ 12ರಂದು ಒಂದು ಕೋಮಿನ ಪುರಸಭೆ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿ ನಂತರ ಪುರಸಭೆ ಮುಖ್ಯಾಧಿಕಾರಿಗಳನ್ನು ಉಪವಿಭಾಗಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ದ್ವಾರಮಂಟಪ ನಿರ್ಮಾಣವನ್ನು ಸ್ಥಗಿತಗೊಳಿಸಿ, ನೋಟಿಸ್ ನೀಡುವಂತೆ ಒತ್ತಾಯ ಮಾಡಿ ನೋಟಿಸ್ ನೀಡಿದ್ದಾರೆ. ನಂತರ ಸಭೆ ನಡೆಸಿ, ಕಾಮಗಾರಿ ಇನ್ನೂ ನಡೆಯುತ್ತಿದೆ. ನೀವು ಯಾಕೆ ಕಾಮಗಾರಿ ನಿಲ್ಲಿಸುತ್ತಿಲ್ಲ. ಕಾಮಗಾರಿಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಪುರಸಭೆಯ ಒಂದು ಕೋಮಿನ ಸದಸ್ಯರ ಮೇಲೆ ನೇರ ಆರೋಪ ಮಾಡಿದ್ದಾರೆ.
ರಂಜಾನ್ ತಿಂಗಳಲ್ಲಿ ಸಾಮಾನ್ಯ ಸಭೆ ನಡೆಯುವುದಿಲ್ಲ: ಕಳೆದ ಮಾ.24ಕ್ಕೆ ನಡೆದ ಪುರಸಭೆ ಸಾಮಾನ್ಯ ಸಭೆ ನಡೆದ ಬಳಿಕ ಮೂರು ತಿಂಗಳಾದರೂ ಮತ್ತೆ ಸಾಮಾನ್ಯ ಸಭೆ ನಡೆದಿಲ್ಲ. ಏಪ್ರಿಲ್ ತಿಂಗಳಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ಸಭೆ ನಡೆಸಿಲ್ಲ. ಬಳಿಕ ಮೇ 2ಕ್ಕೆ ರಂಜಾನ್ ಹಬ್ಬ ಮುಗಿದ ನಂತರ ಮೇ 17ಕ್ಕೆ ಸಾಮಾನ್ಯ ಸಭೆ ಇದೆ ಎಂದು ನೋಟಿಸ್ ಕಳುಹಿಸಿದ್ದಾರೆ. ಆದರೆ ನೀತಿ ಸಂಹಿತೆ ಹಿನ್ನೆಲೆ ಆ ಸಭೆ ಕೂಡ ರದ್ದಾಯಿತು. ನಂತರ ಮೂರು ತಿಂಗಳ ಬಳಿಕ ಜೂನ್ 24 ರಂದು ನಡೆದ ಸಾಮಾನ್ಯ ಸಭೆ ಬಳಿಕ ಇದುವರೆಗೂ ಇನ್ನು ಯಾವುದೇ ಸಾಮಾನ್ಯ ಸಭೆ ನಡೆದಿಲ್ಲ ಎಂದು ಆರೋಪ ಮಾಡಿದರು.
ಸದಸ್ಯ ರಾಘವೇಂದ್ರ ಶೇಟ್, ಪುರಸಭೆ ನಾಮನಿರ್ದೇಶಿತರಾದ ಶ್ರೀಪಾದ ಕಂಚುಗಾರ, ಸತೀಶ ನಾಯ್ಕ, ಉದಯ ನಾಯ್ಕ ಹನುಮಾನನಗರ, ರಜನಿ ಪ್ರಭು ಇದ್ದರು.
ಪುರಸಭೆಯಲ್ಲಿ ಕೆಲವು ತಪ್ಪು ನಿರ್ಧಾರದಿಂದ ಭಟ್ಕಳದಲ್ಲಿ ಪದೇ ಪದೇ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇಂತಹ ಅವಘಡಗಳು ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳಬೇಕು. ಅದೇರೀತಿ ಇಂತಹ ಘಟನೆಗಳು ಮತ್ತೆ ಮರುಕಳಿಸಿದರೆ ಪುರಸಭೆ ಮೇಲೆ ಕ್ರಮ ಕೈಗೊಂಡು ಪುರಸಭೆಯನ್ನು ಸೂಪರ್‌ಸೀಡ್ ಮಾಡಬೇಕು.
· ಶ್ರೀಕಾಂತ ನಾಯ್ಕ, ಪುರಸಭೆ ನಾಮನಿರ್ದೇಶಿತ ಸದಸ್ಯ