ದಾಂಡೇಲಿ: ಬಿ.ಎಂ.ಎಸ್ ಸಂಯೋಜಿತ ಪೇಪರ್ ಮಿಲ್ ಮಜ್ದೂರು ಸಂಘದ ಆಶ್ರಯದಲ್ಲಿ ಹಳೆ ನಗರ ಸಭೆಯ ಆವರಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಆರತಿ ಬೆಳಗಿ, ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿವಬಸಪ್ಪ ನರೇಗಲ್, ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಶಿಲ್ಪಿಕಾರರಲ್ಲಿ ವಿಶ್ವಕರ್ಮ ಮೊದಲಿಗರು ಎಂದರು.
ಸೃಷ್ಟಿಕರ್ತ ವಿಶ್ವಕರ್ಮರ ಬಗ್ಗೆ ಮತ್ತು ಅವರ ಅಪಾರವಾದಂತಹ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ಕಾಯಕಯೋಗಿಯಂತೆ ಬದುಕುವ ತತ್ವವನ್ನು ನಾವು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಂ.ಎಸ್ ಸಂಯೋಜಿತ ಪೇಪರ್ ಮಿಲ್ ಮಜ್ದೂರು ಸಂಘದ ಪ್ರಧಾನ ಕಾರ್ಯದರ್ಶಿ ಭರತ್ ಪಾಟೀಲ್, ವಿಶ್ವಕರ್ಮರು ಕಾರ್ಮಿಕ ಬಂಧುಗಳ ಆರಾಧ್ಯದೇವರೆಂದರು. ಕಾರ್ಮಿಕರಾಗಿ ಜೀವನ ಸವೆಸುವ ನಾವು ನೀವೆಲ್ಲರೂ ವಿಶ್ವಕರ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಎಂ.ಎಸ್ ಸಂಯೋಜಿತ ಪೇಪರ್ ಮಿಲ್ ಮಜ್ದೂರು ಸಂಘದ ಪ್ರಮುಖರುಗಳಾದ ಸುಭಾಸ ಅರ್ವೇಕರ, ಮೋಹನ ಸಿಂಗ್, ಮಲ್ಲಪ್ಪ ನೀಲ್ಜಿ, ಅನಂತ ಕಿಣಿ, ಕೃಷ್ಣ ನಾಯ್ಕ, ಗುರುದಾಸ ಗವಸ, ಗೋಪಾಲ ಸಿಂಗ್ ರಜಪೂತ್, ನಾಗರಾಜ ಕಲಭಾವಿ, ಸುನೀಲ್, ರಾಜೇಶ ಗವಸ, ಚಂದ್ರು ಆರ್ಯ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.