ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ 2.69 ಕೋಟಿ ರೂ ಹಣವನ್ನು ಪತ್ನಿಯ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದ ಸಹಾಯಕ ವ್ಯವಸ್ಥಾಪಕನನ್ನು ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.
ಕುಮಾರ ಬೋನಾಲ ಕೃಷ್ಣಮೂರ್ತಿ ಬಂಧಿತ ವ್ಯಕ್ತಿ. ಮೂಲತಃ ಆಂಧ್ರಪ್ರದೇಶದವನಾದ ಈತ ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ. 2022 ರ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಸಿಬ್ಬಂದಿಯ ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು, ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ವರ್ಗಾವಣೆ ಮಾಡಿ ವಂಚನೆ ಮಾಡಿದ್ದ.
ಈ ಕುರಿತು ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಬ್ಬಳ್ಳಿಯಲ್ಲಿ ಕುಮಾರ ಬೋನಾಲನನ್ನು ವಶಕ್ಕೆ ಪಡೆದಿದ್ದಾರೆ. ವರ್ಗಾಯಿಸಿಕೊಂಡ ಎಲ್ಲ ಹಣವನ್ನು ಆನ್ಲೈನ್ ಗೇಮ್ ಆಡಿ ಕಳೆದುಕೊಂಡಿರುವುದಾಗಿ ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.
ಎಸ್.ಪಿ ಸುಮನ್ ಪೆನ್ನೆಕರ್, ಎಎಸ್ಪಿ ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಅಮೀನ್ ಸಾಬ ಅತ್ತಾರ, ಉದಯ ಡಿ, ಸಿಬ್ಬಂದಿ ಬಸವರಾಜ, ಮಹಮ್ಮದ್ ಶಫಿ, ಗಜಾನನ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.