ಅಂಕೋಲಾ: ತಾಲೂಕಿನ ಮಂಜಗುಣಿಯ 500 ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯರು ಲೋಕೋಪಯೋಗಿ ಇಲಾಖೆಯವರನ್ನು ಕರೆಯಿಸಿ ಇದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಚರ್ಚಿಸಿದರು. ಅದರಂತೆ ಲೋಕೋಪಯೋಗಿ ಇಲಾಖೆಯವರು ಜೆಸಿಬಿ, ರೋಲರ್ ಬಳಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿಗೆ ಮುಂದಾಗಿದ್ದಾರೆ.
ಈ ಹದಗೆಟ್ಟ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ನವರು ತೆರಳಲು ಹಾಕುತ್ತಿದ್ದರು. ಬಾರಿ ಹೊಂಡದಿಂದ ಕೂಡಿರುವುದರಿಂದ ಇಲ್ಲಿ ಯಾವುದೇ ಸಣ್ಣಪುಟ್ಟ ಹಾನಿ ಉಂಟಾದರೆ ಚಾಲಕರೆ ಭರಣ ಮಾಡಬೇಕಿರುವುದರಿಂದ ಚಾಲಕರು ರಸ್ತೆ ದುರಸ್ತಿಯಾಗದಿದ್ದರೆ ನಾವು ಮಂಜಗುಣಿ ತಾರೆವರೆಗೆ ಮಾತ್ರ ತೆರಳುತ್ತೇವೆ ಎಂದು ಘಟಕ ವ್ಯವಸ್ಥಾಪಕರಿಗೆ ವಿನಂತಿಸಿಕೊಂಡಿದ್ದರು.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ಸ್ಥಳೀಯ ಗ್ರಾ.ಪಂ.ಸದಸ್ಯ ವೆಂಕಟ್ರಮಣ ಲೋಕೋಪಯೋಗಿ ಇಲಾಖೆಯವರೊಂದಿಗೆ ಮಾತನಾಡಿ ತಕ್ಷಣ ದುರಸ್ತಿ ಕಾರ್ಯ ಮಾಡಬೇಕು ಎಂದು ವಿನಂತಿಸಿಕೊಂಡರು. ಅದರಂತೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಕೋಳೆಕರ ಮಾತನಾಡಿ, ಈಗಾಗಲೇ ಕಾಂಕ್ರೆಟ್ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಮಂಜೂರಿಯಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಮಾಡಲಾಗುವುದು ಎಂದಿದ್ದರು. ಅದರಂತೆ ಶನಿವಾರ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ.