ಜೊಯಿಡಾ: ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ತಹಶೀಲ್ದಾರರಿಲ್ಲದೆ ತಾಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಕಚೇರಿಯ ಸಿಬ್ಬಂದಿ ಸಾರಥಿ ಇಲ್ಲದ ರಥದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಜೊಯಿಡಾ ಮೊದಲೇ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ತಹಶೀಲ್ದಾರರಿಲ್ಲದ ಕಾರಣ ತಾಲೂಕಿನ ಎಲ್ಲಾ ಕೆಲಸಗಳು ಹಿಂದುಳಿದಿದೆ. ದಾಂಡೇಲಿಯ ಪ್ರಭಾರಿ ತಹಶೀಲ್ದಾರರು ಕಾರ್ಯನಿರ್ವಹಿಸುತ್ತಿದ್ದು, ಇವರು ದಿನವೂ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಿಂದುಳಿದ ತಾಲೂಕಿನಲ್ಲಿ ತಹಶೀಲ್ದಾರರ ಕೊರತೆ ಎದ್ದು ಕಾಣುತ್ತಿದ್ದು, ಜಿಲ್ಲಾಡಳಿತ, ಜನಪ್ರತಿನಿಧಿಗಳು ನೂತನ ತಹಶೀಲ್ದಾರರನ್ನು ಜೊಯಿಡಾಕ್ಕೆ ನೇಮಿಸಬೇಕಿದೆ.
ತಹಶೀಲ್ದಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, 16 ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ 8 ಮಂದಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇರುವ ಕಾರಣ 8 ಗ್ರಾಮ ಲೆಕ್ಕಿಗರೇ ತಾಲೂಕಿನ ಎಲ್ಲಾ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉಪ ತಹಶೀಲ್ದಾರ ಹುದ್ದೆಯೂ ಖಾಲಿ ಇದ್ದು, ಇನ್ನೂ ಹಲವು ಪೋಸ್ಟ್ಗಳು ತಹಶೀಲ್ದಾರ ಖಾಲಿ ಉಳಿದುಕೊಂಡಿದೆ.
ಅದಲ್ಲದೇ ತಹಶೀಲ್ದಾರ ಕಚೇರಿಯು ಸಂಪೂರ್ಣವಾಗಿ ಮಳೆಗಾಲದಲ್ಲಿ ಸೋರುತ್ತಿದೆ. ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದೆ. ಸೋರುವ ಕಟ್ಟಡದಿಂದಾಗಿ ಇಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದೇ ಕಷ್ಟವಾಗಿದೆ. ಕಚೇರಿಯ ಒಳ ಭಾಗದಲ್ಲಿ ನೀರು ಸೋರುವಲ್ಲಿ ಬಕೆಟ್‌ಗಳನ್ನು ಇಡಲಾಗಿದ್ದು, ಕೆಲ ಕಡೆಗಳಂತೂ ಮಳೆಯ ನೀರು ಬಿದ್ದು ಬಿದ್ದು ಗೋಡೆ ಕುಸಿಯುವ ಸ್ಥಿತಿಯಲ್ಲಿದೆ. ಹೊಸ ತಹಶೀಲ್ದಾರ ಕಚೇರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಕಟ್ಟಡವು ಸರಿಯಿಲ್ಲದ ಕಾರಣ ಸೋರುವ ಕಟ್ಟಡದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಕೋಟ್…
ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರರಿಲ್ಲದೇ ಇರುವ ಕಾರಣ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತಾಲೂಕುಗಳ ಪೈಕಿಯಲ್ಲಿ ಜೊಯಿಡಾ ಕೂಡಾ ಒಂದು. ದೊಡ್ಡ ತಾಲೂಕಾದ್ದರಿಂದ ಸಮಸ್ಯೆ ಸಾಕಷ್ಟಿದೆ. ಕೂಡಲೇ ಜೊಯಿಡಾ ತಹಶೀಲ್ದಾರ ಕಚೇರಿಯ ಅವ್ಯವಸ್ಥೆ ಸರಿಪಡಿಸಬೇಕಿದೆ.
• ಹರೀಶ ಭಟ್ಟ, ಸ್ಥಳೀಯ