ಹೊನ್ನಾವರ: ಶ್ರೀಕ್ಷೇತ್ರ ಕರ್ಕಿಯ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ 37ನೇ ಚಾತುರ್ಮಾಸ್ಯ ವ್ರತಾಚರಣೆಯು ಸಂಪನ್ನಗೊಂಡಿತು.
ಪ್ರಪ್ರಥಮ ಬಾರಿಗೆ ಶ್ರೀದತ್ತಾತ್ರೇಯ ಕ್ಷೇತ್ರವಾದ ಗುಲ್ಬರ್ಗಾ ಜಿಲ್ಲೆಯ ದೇವಲ ಗಾಣಗಾಪುರದ ಶ್ರೀಜಗದ್ಗುರು ಆದಿಶಂಕರಾಚಾರ್ಯ ಮಠದಲ್ಲಿ ಆಷಾಢ ಪೂರ್ಣಿಮೆಯ ಜುಲೈ 13ರಂದು ವ್ಯಾಸ ಪೂಜೆಯೊಂದಿಗೆ ಪ್ರಾರಂಭಗಗೊಂಡಿದ್ದ ಚಾತುರ್ಮಾಸ್ಯ ವ್ರತವು, ಎರಡು ತಿಂಗಳುಗಳ ಕಾಲ ನಡೆದು ಭಾದ್ರಪದ ಪೂರ್ಣಿಮೆಯ ಸೆ.10ರಂದು ಗುಲ್ಬರ್ಗಾದಲ್ಲಿ ಸೀಮೋಲ್ಲಂಘನದೊಂದಿಗೆ ಸಂಪನ್ನಗೊಂಡಿತು.
ಇನ್ನು ಅಲ್ಲಿಯ ಭಾವಸಾರ ಕ್ಷತ್ರಿಯ ಸಮಾಜದ ಶ್ರೀಅಂಬಾ ಭವಾನಿ, ಶ್ರೀಎಲ್ಲಮ್ಮ ದೇವಿ ದೇವಾಲಯದ ಸಭಾಂಗಣದಲ್ಲಿ ತಮ್ಮ 37ನೆಯ ಚಾತುರ್ಮಾಸ್ಯ ಕಾರ್ಯಕ್ರಮದ ಸೀಮೋಲ್ಲಂಘನ ಕಾರ್ಯಕ್ರಮದ ನಂತರ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿದೆ. ಜಗತ್ತಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ. ಚಾತುರ್ಮಾಸ್ಯ ವೃಥಾಚಾರಣೆ ಸಂದರ್ಭದಲ್ಲಿ ಸನ್ಯಾಸಿಗಳು ಎರಡು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿದ್ದು ಎಲ್ಲಿಯೂ ಸಂಚರಿಸದೆ ಭಕ್ತರಿಗೆ ದರ್ಶನ ನೀಡುತ್ತಾರೆ. ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ, ವಿಶೇಷ ಪರಂಪರೆಯನ್ನು ಹೊಂದಿದೆ ಎಂದರು.
ಶ್ರೀ ದೇವಲ ಗಾಣಗಾಪುರದ ಶ್ರೀಶಂಕರಮಠದಲ್ಲಿ ದತ್ತ ಪೂಜೆ ನೆರವೇರಿಸಿ ಪಾಲಕಿಯನ್ನು ಶ್ರೀದತ್ತ ಮಂದಿರ ತನಕ ತೆಗೆದುಕೊಂಡು ಹೋಗಿ, ಮರಳಿ ಶ್ರೀಶಂಕರಮಠಕ್ಕೆ ತರಲಾಯಿತು. ಶ್ರೀಗಳ ನೇತೃತ್ವದಲ್ಲಿ ದಿಗಂಬರ ದಿಗಂಬರ ದಿಗಂಬರ ಶಬ್ದ ಎಲ್ಲ ರಸ್ತೆಗಳಲ್ಲಿ ಉದ್ಘೋಷಿಸಿತು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಜಾನನ ವರ್ಣೇಕರ್, ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಕಾರ್ಯಧ್ಯಕ್ಷ ಆರ್.ಎಸ್.ರಾಯ್ಕರ್, ಶ್ರೀಮಠದ ಟ್ರಸ್ಟಿಗಳಾದ ಅರುಣ್ ಕುಮಾರ್ ಸಾಗರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು, ರಾಧಾಬಾಯಿ ಖರ್ಗೆ, ವಿಮಾನ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಬೆಂಗಳೂರು ದೈವಜ್ಞ ಯುವಕ ಸಂಘದ ಅಧ್ಯಕ್ಷ ಮಹೇಶ್ ಜಿ.ಶೇಟ್, ಪಶ್ಚಿಮ ಸಂಘದ ಅಧ್ಯಕ್ಷ ದೀಪಕ್ ಶೇಟ್, ಗುರುಪೀಠ ಸೇವಾ ಸಮಿತಿಯ ಸುರೇಶ್ ಶೇಟ್, ಮಂಗಳೂರು ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ್ ಶೇಟ್, ರಾಜೇಂದ್ರಕಾಂತ ಶೇಟ್, ನಾಗರಾಜ್ ಶೇಟ್ ಸೇರಿದಂತೆ ಕಲ್ಬುರ್ಗಿ ದೈವಜ್ಞ ಸಮಾಜದ ಮಾತೆಯರು, ಜಿಲ್ಲೆಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಜಗತ್ ಸರ್ಕಲ್ ನಿಂದ ಶ್ರೀಗಳವರನ್ನು ಮೆರವಣಿಗೆ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ವನಿತಾ ವರ್ಣೇಕರ್ ಪ್ರಾರ್ಥಿಸಿದರು. ದೈವಜ್ಞ ಸಮಾಜದವರು ಅಪಾರ ಸಂಖ್ಯೆಯಲ್ಲಿ ಶ್ರೀಗಳ ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಭಾಗಿಯಾದರು.