ಕಾರವಾರ: ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಶಾಲಾ ಅವರಣದಲ್ಲಿ ಮಕ್ಕಳ ಸುರಕ್ಷತೆ, ಶುಚಿತ್ವ ಹಾಗೂ ಆರೋಗ್ಯಕರ ವಾತಾವರಣ ಕಾಪಾಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಿಯೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ.4 ಲಕ್ಷ ವೆಚ್ಚದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಸುಸಜ್ಜಿತ ಶೌಚಾಲಯ ನಿರ್ಮಾಣಗೊಂಡಿದೆ.
ಕೆರವಡಿ ಗ್ರಾಮ ಪಂಚಾಯತಿಯಿAದ 3- 4 ಕಿ.ಮೀ. ದೂರದಲ್ಲಿರುವ ಕಡಿಯೆ ಗ್ರಾಮದ ಸುತ್ತಲೂ ದಟ್ಟವಾದ ಅರಣ್ಯವಿದೆ. ಕಾಡಿನ ಮಧ್ಯದಲ್ಲಿರುವ ಈ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಒಟ್ಟು 10 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಶಾಲಾ ಪ್ರಾರಂಭದಲ್ಲಿ ಶಿಕ್ಷಣ ಇಲಾಖೆಯಿಂದ ಕಟ್ಟಿಸಿಕೊಟ್ಟ ಶೌಚಾಲಯ ಕಟ್ಟಡ ಕಾಲ ಕ್ರಮೇಣ ಹಾಳಾದ ಪರಿಣಾಮ ಮಕ್ಕಳು ಮಲಮೂತ್ರ ವಿಸರ್ಜನೆಗೆ ತೆರಳಿದಾಗ ಕಟ್ಟಡವೆಲ್ಲಿ ಬಿದ್ದುಬಿಡುತ್ತದೆಯೋ ಎಂಬ ಆತಂಕದಲ್ಲಿಯೇ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಗ್ರಾಮ ಪಂಚಾಯತಿಯವರು ಮಕ್ಕಳಿಗೆ ಅನುಕೂಲವಾಗುವಂತೆ 2021-22ನೇ ಸಾಲಿನಲ್ಲಿ ನರೇಗಾ ಹಾಗೂ ಶಿಕ್ಷಣ ಇಲಾಖೆ ಒಗ್ಗೂಡಿಸುವಿಕೆ ಕಾಮಗಾರಿಯಡಿ ರೂ. 4 ಲಕ್ಷ ವೆಚ್ಛದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಿದ್ದಾರೆ.
ಶೌಚಾಲಯಕ್ಕೆ ನೀರು, ಬೆಳಕು, ಕೈ ತೊಳೆಯಲು ಸಿಂಕ್, ಕನ್ನಡಿ ವ್ಯವಸ್ಥೆ ಕಲ್ಪಿಸಿದ್ದು, ಕಟ್ಟಡದ ಗೊಡೆಯ ಮೇಲೆ ಆರೋಗ್ಯ, ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಚಿತ್ರ ಬಿಡಿಸಿ ಗೋಡೆ ಬರಹ ಬರೆಸಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕಿ ಪುಷ್ಪಾ ಗುನಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಶಾಲಾ ಶೌಚಾಲಯ ಕಾಮಗಾರಿಯಲ್ಲಿ ಒಟ್ಟು 322 ಮಾನವ ದಿನಗಳನ್ನ ಸೃಜಿಸಲಾಗಿದೆ. ಇದಕ್ಕಾಗಿ 1 ಲಕ್ಷ ಕೂಲಿ ಮೊತ್ತ ಭರಿಸಲಾಗಿದ್ದು, 3 ಲಕ್ಷ ಸಾಮಗ್ರಿ ಮೊತ್ತ ಪಾವತಿಯಾಗಬೇಕಿದೆ. ನರೇಗಾ ನೆರವಿನಿಂದ ನಿರ್ಮಾಣವಾದ ಪ್ರತ್ಯೇಕ ಶೌಚಾಲಯದಿಂದ ಮಕ್ಕಳ ಮುಖದಲ್ಲಿ ನಿರ್ಭಯ ಭಾವನೆ ವ್ಯಕ್ತವಾಗುತ್ತಿದೆ.