ಕುಮಟಾ: ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಇಬ್ಬರು ಶಿಕ್ಷಕರನ್ನು ಗುಡೇಅಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಾವಳಿ ಕಾವಲು ಪೊಲೀಸರಿಂದ ಸನ್ಮಾನಿಸಲಾಯಿತು.
ತಾಲೂಕಿನ ಗುಡೇಅಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಜಾನವಿ ಮತ್ತು ವಸಂತ ಮಹಾದೇವ ಅವರು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶಿಕ್ಷಕ ದಿನಾಚರಣೆಯ ನಿಮಿತ್ತ ಈ ಶಾಲೆಗೆ ಭೇಟಿ ನೀಡಿದ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಈ ಇಬ್ಬರು ಶಿಕ್ಷಕರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಅಲ್ಲದೇ ಇಂಥ ಶಿಕ್ಷಕರು ಸಮಾಜಕ್ಕೆ ಮಾದರಿ ಎಂದ ಕರಾವಳಿ ಕಾವಲು ಪೊಲೀಸ್ ನಿರೀಕ್ಷಕಿ ರೇವತಿ, ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಮಹತ್ವ ಕಾರ್ಯ ಮಾಡುವ ಶಿಕ್ಷಕರನ್ನು ಸನ್ಮಾನಿಸಬೇಕೆಂಬ ಸದುದ್ಧೇಶದೊಂದಿಗೆ ಉಡುಪಿಯ ಮಲ್ಪೆಯಲ್ಲಿರುವ ಕೇಂದ್ರ ಕಚೇರಿಯ ಎಸ್ಪಿ ಅವರು ನೀಡಿದ ಆದೇಶದಂತೆ ನಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರಾವಳಿ ತೀರದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ, ಸನ್ಮಾನಿಸಲಾಗಿದೆ. ನಮ್ಮ ಇಲಾಖೆಯಿಂದ ಮೀನುಗಾರರಿಗೆ ಬೋಟ್ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಇತ್ತಿಚೇಗೆ ನಮ್ಮ ಇಲಾಖೆಯಿಂದ ಕಡಲ ತೀರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದೆವು. ವಿದ್ಯಾರ್ಥಿಗಳು ಕೂಡ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಅವರು ತಿಳಿಸಿದರು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ಕರಾವಳಿ ಕಾವಲು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ದಯಾನಂದ ಜೋಗಳೆಕರ್, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಇದ್ದರು.