ಮುಂಡಗೋಡ: ಪಟ್ಟಣದ ಸರಕಾರಿ ಶಾಸಕರ ಮಾದರಿ ಶಾಲೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನೀಡಲಾಗಿದ್ದ 100 ಡೆಸ್ಕ್ ಅನ್ನು ಸಚಿವ ಶಿವರಾಮ ಹೆಬ್ಬಾರ್ ಮಂಗಳವಾರ ಉದ್ಘಾಟಿಸಿದರು.
ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆಯ ಅಗತ್ಯತೆಯ ಕುರಿತು ಅರಿತು, ಶಾಲೆಯ ಮುಖ್ಯ ಶಿಕ್ಷಕರನ್ನು ವಿಚಾರಿಸಿದಾಗ 150 ಡೆಸ್ಕ್ಗಳು ಬೇಕಾಗುತ್ತವೆ ಎಂದು ತಿಳಿಸಿದ್ದರು. ಈಗ 100 ಡೆಸ್ಕ್ಗಳನ್ನು ನೀಡಿದ್ದೇನೆ. ಇನ್ನುಳಿದ 50 ಡೆಸ್ಕ್ಗಳನ್ನು ಒಂದು ವಾರದೊಳಗಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳ ಕೊರತೆಯಾದರೆ ಪಾಲಕರು ಖಾಸಗಿ ಶಾಲೆಯತ್ತ ಹೆಜ್ಜೆ ಇಡುತ್ತಾರೆ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿದರೆ ಬಡವರ, ಮಧ್ಯಮ ಕುಟುಂಬಗಳ ಮಕ್ಕಳು ಕಲಿಯಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಪ.ಪಂ ಅಧ್ಯಕ್ಷೆ ಜಯಸುಧಾ ಬಸವರಾಜ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಎಲ್ಎಸ್ಎಂಪಿ ಮಾಜಿ ಅಧ್ಯಕ್ಷ ಉಮೇಶ ಬಿಜಾಪುರ, ದೇವು ಪಾಟೀಲ, ಪ.ಪಂ ಸದಸ್ಯ ಶಿವರಾಜ ಸುಬ್ಬಾಯವರ, ನಾಗರಾಜ ಗುಬ್ಬಕ್ಕನವರ, ಶಾಲಾ ಮುಖ್ಯ ಶಿಕ್ಷಕ ವಿನೋದ ನಾಯಕ್, ಶಿಕ್ಷಕರ ವೃಂದ ಸೇರಿದಂತೆ ಮುಂತಾದವರು ಇದ್ದರು.