ದಾಂಡೇಲಿ: ನಗರದಲ್ಲಿ ಹರಿಯುತ್ತಿರುವ ಕಾಳಿ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿರುವುದರಿಂದ ಮತ್ತು ಈಗಾಗಲೆ ಅಧಿಕೃತವಾಗಿ ಮೂರು ಜೀವ ಬಲಿ ಪಡೆದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಗರಾಡಳಿತ, ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗಳ ಸಹಕಾರದಲ್ಲಿ ರ್ಯಾಪ್ಟ್ ಮೂಲಕ ಗಣಪತಿ ವಿಸರ್ಜನೆಗೆ ಅನೂಕೂಲ ಮಾಡಿಕೊಡಲಾಗಿದೆ.
ಕಾಳಿ ನದಿಯಲ್ಲಿ ಈಗಾಗಲೆ ಮೊಸಳೆಗಳಿಂದ ಮೂರು ಜೀವ ಬಲಿ ಪಡೆದುಕೊಂಡಿದೆಯಾದರೂ ಜನ ಮಾತ್ರ ನದಿಗಿಳಿಯುತ್ತಿರುವುದು ಕಡಿಮೆಯಾಗುತ್ತಿಲ್ಲ. ಮೊಸಳೆಗಳಿವೆ, ನದಿಗಿಳಿಯದಂತೆ ಎಚ್ಚರಿಕೆಯ ನಾಮಫಲಕಗಳನ್ನು ನದಿ ದಡದ ಅಲ್ಲಲ್ಲಿ ಹಾಕಲಾಗಿದ್ದರೂ ಜನತೆ ಮಾತ್ರ ನಿಷ್ಕಾಳಜಿ ವಹಿಸುತ್ತಿರುವುದು ಕಂಡು ಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮೀನು ಹಿಡಿಯಲೆಂದು ನದಿಗಿಳಿದಿದ್ದ ಯುವಕನೋರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆ ಮತ್ತೊಂದು ದುರ್ಘಟನೆ ನಡೆಯದಿರಲೆಂದು ಅರಣ್ಯ ಇಲಾಖೆ ತಾಲೂಕಾಡಳಿತ ಮತ್ತು ನಗರಾಡಳಿತ ಸಹಕಾರದಲ್ಲಿ ಗಣೇಶನ ವಿಸರ್ಜಣೆಗೆ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಿದೆ.
ನದಿಗಿಳಿದು ಗಣೇಶನ ವಿಸರ್ಜನೆ ಮಾಡುವುದು ಪ್ರಸ್ತುತ ಪರಿಸ್ಥೀತಿಯಲ್ಲಿ ಸರಿಯಲ್ಲ ಎಂಬುವುದನ್ನು ಅರಿತ ಅರಣ್ಯ ಇಲಾಖೆ ರ್ಯಾಪ್ಟ್ ಮೂಲಕ ಗಣಪತಿ ವಿಸರ್ಜನೆಗೆ ಅವಕಾಶವನ್ನು ಕಲ್ಪಿಸಿದೆ. ಆ ಪ್ರಕಾರವಾಗಿ ಈ ವರ್ಷ ರ್ಯಾಪ್ಟ್ ಮೂಲಕ ಗಣಪತಿ ವಿಸರ್ಜನೆ ಮಾಡುತ್ತಿರುವ ದೃಶ್ಯಗಳು ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ಕಂಡುಬಂದಿದೆ. ಮೆಟ್ಟಿಲುಗಳ ಮೇಲೆ ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿದ ನಂತರ ಕುಟುಂಬದ ಒಬ್ಬ ಸದಸ್ಯರು ವಿಸರ್ಜಿಸುವ ಗಣೇಶ ವಿಗ್ರಹ ಸಹಿತ ರ್ಯಾಪ್ಟ್ನಲ್ಲಿ ಕುಳಿತುಕೊಳ್ಳಬೇಕು. ಹೀಗೆ ಮೂರು ಅಥವಾ ನಾಲ್ಕು ಗಣಪತಿಗಳು ಒಂದೇ ರ್ಯಾಪ್ಟ್ನಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ವಿಸರ್ಜನೆಯ ಸಂದರ್ಭದಲ್ಲಿ ಮೊಸಳೆಗಳಿಂದಾಗುವ ಅಪಾಯ ತಪ್ಪಿಸಲು ಸ್ಥಳಿಯ ಆಡಳಿತ ಯಂತ್ರಕ್ಕೆ ಈ ಮಾರ್ಗ ಅನಿವಾರ್ಯವಾಗಿತ್ತು. ಈ ಸ್ಥಳದಲ್ಲಿ ಮತ್ತು ಇನ್ನಿತರ ಎಲ್ಲ ಸ್ಥಳಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡುವ ಎಲ್ಲ ಸಾರ್ವಜನಿಕರು ಮುಂಜಾಗೃತಾ ಕ್ರಮ ಅನುಸರಿಸಿ ಸಹಕರಿಸಬೇಕೆಂದು ಸ್ಥಳದಲ್ಲಿ ಉಪಸ್ಥಿತರಿದ್ದ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ, ತಹಶೀಲ್ದಾರ್ ಶೈಲೇಶ ಪರಮಾನಂದ ಮತ್ತು ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ್, ಪಿಎಸೈ ಕಿರಣ್ ಪಾಟೀಲ್ ತಿಳಿಸಿದರು.