ಮಂಗಳೂರು: ಕಡಲ ತಡಿ ಮಂಗಳೂರಿಗೆ ಇಂದು ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಲ್ಲಿಗೆ ಹೂವಿನ ಹಾರ ಮತ್ತು ಪರಶುರಾಮನ ಮೂರ್ತಿಯನ್ನು ನೀಡಿ ಗೌರವಿಸಿದರು. ಇದಕ್ಕೂ ಮೊದಲು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಪೇಟ, ಹಾರ ತೊಡಿಸಿ ಉಡುಪಿ ಕೃಷ್ಣನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು.
ಮಂಗಳೂರಿನಲ್ಲಿ ಮೋದಿ 3,800 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳು ಕರಾವಳಿಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ.
ಸಮಾರಂಭದಲ್ಲಿ ಮೋದಿ ಸಾಂಕೇತಿಕವಾಗಿ ಮೂವರು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪ್ರದಾನಿಸಿದರು.
ಬಳಿಕ ಮಾತನಾಡಿದ ಮೋದಿ, “ಇಂದು ಭಾರತದ ಕಡಲ ಶಕ್ತಿಗೆ ಮಹತ್ವದ ದಿನ. ರಾಷ್ಟ್ರದ ಸೈನ್ಯ ಬಲಿಷ್ಠವಾಗಿರಬೇಕು, ಆರ್ಥಿಕತೆ ಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ಇಂದು ದೇಶ ಎಲ್ಲಾ ಅಗತ್ಯಗಳ ಸಾಕಾರಕ್ಕೆ ಸಾಕ್ಷಿಯಾಗಿದೆ. ನಿನ್ನೆ ಕೊಚ್ಚಿಯಲ್ಲಿ ಭಾರತದ ಮೊದಲ ದೇಶೀಯ ವಿಮಾನವಾಹಕದ ಲೋಕಾರ್ಪಣೆ ಸಮಸ್ತ ಭಾರತೀಯರನ್ನು ಹೆಮ್ಮೆಗೊಳಿಸಿದೆ. ಇಂದು ಮಂಗಳೂರಿನಲ್ಲಿ 3,8000 ಯೋಜನೆಗೆ ಶಿಲಾನ್ಯಾಸ, ಭೂಮಿಪೂಜೆ, ಚಾಲನೆ ನೆರವೇರಿದೆ. ಈ ಯೋಜನೆಗಳಿಗಾಗಿ ಕರ್ನಾಟಕ ಜನತೆಗೆ ಅಭಿನಂದನೆಗಳು. ಈ ಯೋಜನೆಗಳಿಂದ ರಾಜ್ಯದಲ್ಲಿ ವ್ಯಾಪಾರ, ಉದ್ಯೋಗಕ್ಕೆ ಶಕ್ತಿ ಸಿಗಲಿದೆ. ಉದ್ಯಮಗಳಿಗೆ ಬಲ ಸಿಗಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಅಡಿಯಲ್ಲಿ ಮಂಗಳೂರಿನ ರೈತರ ಬೆಳೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪಿಸುವುದು ಸುಲಭವಾಗಲಿದೆ.
ಮೇಕ್ ಇನ್ ಇಂಡಿಯಾ, ನಿರ್ದೇಶಿತ ಭಾರತದ ನಿರ್ಮಾಣಕ್ಕೆ ಉತ್ಪಾದನಾ ವಲಯ, ಬಂದರು ಅತಿ ಮುಖ್ಯ. ದೇಶದಲ್ಲಿ ಇಂದು ರಸ್ತೆ ಸೌಕರ್ಯ ವೃದ್ಧಿಸಲಾಗುತ್ತಿದೆ, ಕರಾವಳಿಗೆ ಶಕ್ತಿ ತುಂಬಲಾಗುತ್ತದೆ. ಕೆಲ ವರ್ಷಗಳಿಂದ ಬಂದರು ಆಧಾರಿತ ಅಭಿವೃದ್ಧಿಯನ್ನು ಧ್ಯೇಯ ಮಾಡಲಾಗಿದೆ. ಇದರಿಂದ ಕೇವಲ 8 ವರ್ಷಗಳಲ್ಲಿ ಭಾರತದ ಬಂದರು ಸಾಮರ್ಥ್ಯ ದುಪ್ಪಟ್ಟುಗೊಂಡಿದೆ.
ಇಂದು ಗ್ಯಾಸ್ ಮತ್ತು ಲಿಕ್ವಿಡ್ ಕಾರ್ಬನ್ ಸಂಬಂಧಿತ ನಾಲ್ಕು ಯೋಜನೆಗಳಿಂದ ಕರ್ನಾಟಕ ಮತ್ತು ದೇಶಕ್ಕೆ ಪ್ರಯೋಜನವಾಗಲಿದೆ. ಇದರಿಂದ ಖಾದ್ಯ ತೈಲ, ಅಡುಗೆ ಅನಿಲ ಆಮದು ಕಡಿಮೆಯಾಗಲಿದೆ. ಹಸಿರುಪ್ರಗತಿ ಮತ್ತು ಹಸಿರು ಉದ್ಯೋಗ ಅತ್ಯಗತ್ಯ. ಈ ಯೋಜನೆಗಳು ನಮ್ಮ ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ನದಿ ನೀರಿನ ಅವಲಂಬನೆಯಿಂದ ಈ ಯೋಜನೆಗಳು ಮುಕ್ತವಾಗಿದೆ. 8 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಧಿಕ ಪ್ರಯೋಜನ ಕರ್ನಾಟಕಕ್ಕೆ ದೊರೆತಿದೆ. ಸಾಗಾರ ಮಾಲದ ಹೆಚ್ಚಿನ ಪ್ರಯೋಜನ ಪಡೆದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಇಂದಿನ ಭಾರತ ಆಧುನಿಕ ಮೂಲಸೌಕರ್ಯದತ್ತ ಗಮನಹರಿಸಿದೆ. ಇದು ಸೌಲಭ್ಯ ವೃದ್ಧಿಸುವ ಜೊತೆಗೆ ಹೊಸ ಉದ್ಯೋಗವನ್ನು ಸೃಷ್ಟಿಸುತ್ತದೆ. ಅಮೃತ ಕಾಲ ಸಿದ್ಧಿಯ ಮಾರ್ಗವೂ ಇದಾಗಿದೆ ಮೂಲಸೌಕರ್ಯ ವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ, ಗೌರವದ ಜೀವನಕ್ಕಾಗಿ ಪಕ್ಕಾ ಮನೆ, ಶುದ್ಧನೀರು, ಶೌಚಾಲಯ ಮಹತ್ವದ್ದು. ನಮ್ಮ ಡಬಲ್ ಇಂಜಿನ್ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದೆ. 3 ಕೋಟಿಗೂ ಅಧಿಕ ಮನೆ ನಿರ್ಮಾಣವಾಗಿದೆ. ಕರ್ನಾಟದಲ್ಲಿ8 ಲಕ್ಷ ಮನೆಗಳಿಗೆ ಮಂಜೂರು ನೀಡಲಾಗಿದೆ. 6 ಕೋಟಿ ಅಧಿಕ ಮನೆಗಳಿಗೆ ಪೈಪ್ ಮೂಲಕ ನೀರು ತಲುಪಿಸಲಾಗಿದೆ. ಇದರಲ್ಲಿ ಕರ್ನಾಟಕದ ಸಂಖ್ಯೆಯೂ ದೊಡ್ಡದು. ಕಡಿಮೆ ವೆಚ್ಚದ ಚಿಕಿತ್ಸೆ ಬಡವರ ಅವಶ್ಯಕತೆ. ಆಯುಷ್ಮಾನ್ ಭಾರತ್ ಯೋಜನೆ ಬಡವರ ಚಿಂತೆ ದೂರ ಮಾಡಿದೆ. ಕರ್ನಾಟಕದ ಜನರಿಗೂ ಪ್ರಯೋಜನ ಸಿಕ್ಕಿದೆ. ನಮ್ಮ ಸರ್ಕಾರ ಸಣ್ಣ ರೈತರು, ಸಣ್ಣ ಮೀನುಗಾರರು, ವ್ಯಾಪಾರಿಗಳು, ಬದಿ ವ್ಯಾಪಾರಿಗಳಿಗೆ ದೇಶದ ವಿಕಾಸದ ಲಾಭ ಸಿಗಲು ಆರಂಭವಾಗಿದೆ.ಪಿಎಂ ಕಿಸಾನ್ , ಸ್ವನಿಧಿ, ಮುದ್ರಾ ಯೋಜನೆಯ ಲಾಭ ಜನರಿಗೆ ಸಿಗುತ್ತಿದೆ.
ಮೀನುಗಾರರ ಜೀವನ ಸುಧಾರಿಸಲು ಡಬಲ್ ಇಂಜಿನ್ ಸರ್ಕಾರ ಮಹತ್ವದ ಕಾರ್ಯ ಮಾಡುತ್ತಿದೆ. ಪಿಎಂ ಕಿಸಾನ್ ಸಂಪದ, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಹಾಯ ಮಾಡಲಾಗುತ್ತಿದೆ. ಜನರ ಆಕಾಂಕ್ಷೆ ಪೂರೈಸಲು ಹಗಲು ರಾತ್ರಿ ಶ್ರಮಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಇಲ್ಲಿನ ಕರಾವಳಿ, ವೆಸ್ಟರ್ನ್ ಘಾಟ್ ಪ್ರವಾಸೋದ್ಯಮಕ್ಕೆ ಸೂಕ್ತ. ಭಾರತದಲ್ಲಿ ಕ್ರೂಝ್ ಟೂರಿಸಂ ಅವಕಾಶ ಹೆಚ್ಚಿದೆ.
ಕಿತ್ತೂರು ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕರನ್ನೂ ಮೋದಿ ಸ್ಮರಿಸಿದರು. ತಿರಂಗಾ ಅಭಿಯಾನದ ಯಶಸ್ಸು ಇಲ್ಲಿನ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟದ ಕರಾವಳಿಗೆ ಆಗಮಿಸುವಾಗ ರಾಷ್ಟ್ರಭಕ್ತಿಯ ಘೋಷಣೆ ನನ್ನನ್ನು ಸದಾ ಪ್ರೇರೇಪಿಸುತ್ತದೆ.
ಕೃಪೆ: http://news13.in