ಕಾರವಾರ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಕುರಿತು ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ನೀಡಲಾಗುವ ಆರೋಗ್ಯ ಸೇವೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸಾರ್ವಜನಿಕರಿಗೆ ಸೆ. 3ರೊಳಗೆ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಜನರಲ್ಲಿ ಈ ಯೋಜನೆ ಯಾರಿಗೆ ಅನ್ವಯವಾಗುತ್ತದೆ ಹಾಗೂ ಯಾರಿಗೆ ಅನ್ವಯವಾಗುದಿಲ್ಲ ಎಂದು ಅವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಆಯುಷ್ಮಾನ್ ಕಾರ್ಡ್ ಹೊಂದಿದ ರೋಗಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸರಿಯಾದ ಸೌಲಭ್ಯ ಇಲ್ಲದೆ ಹೋದಲ್ಲಿ ಅವರಿಗೆ ಬೇರೆ ಆಸ್ಪತ್ರೆಗಳಿಗೆ ಹೋಗಲು ನೀಡುವ ರೆಫೆರೆನ್ಸ್ ಪತ್ರವನ್ನು ನೀಡಿದ ಕುರಿತು ಮತ್ತು ಕಾರ್ಡ್ ಹೊಂದದೆ ಇರುವ ರೋಗಿಗಳು ಆಸ್ಪತ್ರೆಗೆ ಬಂದು ರೆಫೆರೆನ್ಸ್ ಪತ್ರ ಸಿಗದೆ ಮರಳಿ ಹೋದವರ ಕುರಿತು ಮಾಹಿತಿಯನ್ನು ಪಟ್ಟಿ ಮಾಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಈ ಯೋಜನೆಯ ಪ್ರಕ್ರಿಯೆ ಹಾಗೂ ಯೋನೆಯಡಿಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದೊರಕುವ ಸೇವೆಗಳೇನು ಹಾಗೂ ಸೇವೆಗಳನ್ನು ಪಡೆದುಕೊಂಡ ಫಲನಾಭವಿಗಳೆಷ್ಟು ಎಂಬುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೆ.5ರೊಳಗೆ ಸಭೆ ನಡೆಸಿ ದತ್ತಾಂಶ ಪಟ್ಟಿ ತಯಾರಿಸಿ ಸೆ.8ರಂದು ನಿಗದಿಪಡಿಸಲಾಗಿರುವ ಸಭೆಗೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸಂಯೋಜಕ, ಆರೋಗ್ಯ ಮಿತ್ರ ಹಾಗೂ ಇನ್ನಿತರರು ಇದ್ದರು.