ಸಿದ್ದಾಪುರ: ಶಿರಸಿ(ಕದಂಬ) ಜಿಲ್ಲೆ ಆಗಬೇಕು ಎನ್ನುವ ಹೋರಾಟಕ್ಕೆ ನ್ಯಾಯ ದೊರಕುವ ಭರವಸೆ ಇತ್ತು. ಆದರೆ ಈಗ ಆ ಭರವಸೆ ಕುಂಠಿತವಾಗಿದೆ. ಆದರೆ ಸಾರ್ವಜನಿಕರ ಸಹಿ ಸಂಗ್ರಹದ ಜನಾಂದೋಲನದ ಮೂಲಕ ಬಹುದೊಡ್ಡ ಹೋರಾಟಕ್ಕೆ ಸಜ್ಜಾಗಬೇಕಿದೆ. ಅದರ ಆರಂಭ ಸಿದ್ದಾಪುರದಲ್ಲಿ ಆಗುತ್ತಿದೆ ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಶಿರಸಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಅಭಿಯಾನದ ಆರಂಭದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ನಮ್ಮ ಹೋರಾಟ ಕದಂಬ ಜಿಲ್ಲೆ ಆಗುವತನಕ ಮುಂದುವರಿಯುತ್ತದೆ. ಜನಪ್ರತಿನಿಧಿಗಳು ತಮ್ಮ ನಿಷ್ಕಾಳಜಿಯನ್ನು ತೊರೆದು ಈ ಬಗ್ಗೆ ಗಮನ ಹರಿಸಲಿ. ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿಕೊಂಡರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿ ನಾವು ಜಿಲ್ಲೆಯನ್ನು ತುಂಡು ಮಾಡಿ ಅನ್ನುತ್ತಿಲ್ಲ. ಘಟ್ಟದ ಮೇಲಿನ ತಾಲೂಕುಗಳ ಜನರ ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಡುತ್ತಿದ್ದೇವೆ. ಜಿಲ್ಲೆ ಬೇರೆಯಾದರೂ ಪರಸ್ಪರ ಸಂಬಂಧ, ಸಹಕಾರ ಎಂದಿನಂತೆ ಇರುತ್ತದೆ. ಸೀಬರ್ಡ, ಅಣುಸ್ಥಾವರ ಮುಂತಾಗಿ ಬೃಹತ್ ಯೋಜನೆಗಳು ಇರುವ ಕಾರವಾರದ ಬದಲಾವಣೆ ಮುಂದೆ ಆಗುತ್ತದೆ. ಈ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳಬೇಕಿದ್ದು 7 ತಾಲೂಕುಗಳಲ್ಲೂ ಹಮ್ಮಿಕೊಳ್ಳಲಾಗುವದು ಎಂದರು.
ಪ್ರಧಾನ ಕಾರ್ಯದರ್ಶಿ ಎಂ.ಎಂ.ಭಟ್ಟ ಶಿರಸಿ ಮಾತನಾಡಿ ಪ್ರತ್ಯೇಕ ಜಿಲ್ಲೆಯ ಕೂಗು 40 ವರ್ಷಗಳ ಹಿಂದಿನಿಂದ ಇದ್ದರೂ ಅದಕ್ಕೆ ಮನ್ನಣೆ ದೊರಕಿಲ್ಲ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಜನಾಂದೋಲನದ ಮೂಲಕ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳ ಬಳಿ ಮಂಡಿಸಬೇಕಿದೆ. ನವೆಂಬರ್ 1 ರಂದು ಪ್ರತ್ಯೇಕ ಜಿಲ್ಲೆಯ ಘೋಷಣೆ ಆಗಬೇಕು ಎಂದರು.
ಸಾಮಾಜಿಕ ಧುರೀಣರಾದ ವೀರಭದ್ರ ನಾಯ್ಕ, ಕೆರಿಯಪ್ಪ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಧುರೀಣರಾದ ಆಕಾಶ ಕೊಂಡ್ಲಿ, ರಾಘವೇಂದ್ರ ನಾಯ್ಕ,ಹರೀಶ ಗೌಡರ, ಎ.ಜೆ.ನಾಯ್ಕ, ಎಂ.ಎನ್.ನಾಯ್ಕ, ವಾಸುದೇವ ಶೇಟ್,ಪ್ರಶಾಂತ ಶೇಟ್ ಮುಂತಾದವರಿದ್ದರು.
ಹೋರಾಟ ಸಮಿತಿ ತಾಲೂಕಾಧ್ಯಕ್ಷ ಸಿ.ಎಸ್.ಗೌಡರ್ ಸ್ವಾಗತಿಸಿದರು. ವಕೀಲರಾದ ಪಿ.ಬಿ.ಹೊಸೂರ ವಂದಿಸಿದರು.