ಅಂಕೋಲಾ: ತಾಲೂಕಿನ ಬೆಳಸೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕಿತ್ತೂರು ಚನ್ನಮ್ಮ ವಸತಿ ಶಾಲೆಯ ರಸ್ತೆಯನ್ನು ಕೂಡಲೆ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಮೆರೆಗೆ ತಾಲೂಕಾಡಳಿತ ತಾತ್ಕಾಲಿಕವಾಗಿ ರಸ್ತೆಯನ್ನು ಸರಿಪಡಿಸಿದೆ.
ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಅವರು ಬೆಳಸೆಯ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ರಸ್ತೆಯ ದುಸ್ಥಿತಿಯನ್ನು ಕಣ್ಣಾರೆ ಕಂಡ ಅವರು ತಹಶೀಲ್ದಾರ ಉದಯ ಕುಂಬಾರವರಿಗೆ ರಸ್ತೆ ಅವ್ಯವಸ್ಥೆ ಗಮನಿಸಲು ಸೂಚಿಸಿ ಇದೇನು ಮನುಷ್ಯರು ತಿರುಗಾಡುವ ರಸ್ತೆನಾ ಎಂದು ಪ್ರಶ್ನಿಸಿದರು. ಹಾಗೂ ತಕ್ಷಣ ದುರಸ್ತಿ ಮಾಡುವಂತೆ ಸೂಚನೆ ನೀಡಿದ್ದಾರೆ. ರಸ್ತೆಯ ಪಕ್ಕದಲ್ಲೆ ದೊಡ್ಡದಾದ ಗಣಿಗಾರಿಕಾ ಪ್ರದೇಶವಿದ್ದು ತಾತ್ಕಾಲಿಕವಾಗಿ ಅಲ್ಲಿಂದ ಮಣ್ಣನ್ನು ತಂದು ರಸ್ತೆಯ ಹೊಂಡಗಳನ್ನು ಮುಚ್ಚಿಸಿ ಎಂದು ತಹಶೀಲ್ದಾರ ಉದಯ ಕುಂಬಾರ ಹಾಗೂ ಸಿಪಿಐ ಸಂತೋಷ ಶೆಟ್ಟಿಯವರಿಗೂ ಸೂಚಿಸಿದರು. ಸದ್ಯ ತಾತ್ಕಾಲಿಕವಾಗಿ ಮಣ್ಣನ್ನು ಸುರುವಿ ರಸ್ತೆಯನ್ನು ದುರಸ್ತಿಗೊಳಿಸಲಾಗುತ್ತಿದೆ.
ಅಂಕೋಲಾ ತಾಲೂಕಿನ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ರಸ್ತೆಯ ದುಸ್ಥಿತಿಯನ್ನು ನೋಡಿದ್ದೇನೆ. ಅಲ್ಲಿ ಮನುಷ್ಯರು ತಿರುಗಾಡಲು ಆಗದಷ್ಟು ರಸ್ತೆ ಕೆಟ್ಟದಾಗಿದೆ. ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಭೇಟಿ ಮಾಡಲು ಬಂದರೆ ಯಾವ ವಾಹನವೂ ಅಲ್ಲಿಯವರೆಗೆ ಹೋಗುವಂತಿಲ್ಲ. ನಾವು ಹೊದ ಸಂಬರ್ಭದಲ್ಲಿ ಮಕ್ಕಳ ಪಾಲಕರು ಆಟೋ ಮೇಲೆ ಹರಸಾಹಸ ಪಟ್ಟು ಅಲ್ಲಿಗೆ ಬಂದಿರುವುದು ಕಂಡು ಬಂದಿತ್ತು. ಕೂಡಲೇ ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಹೇಳಿದ್ದೇನೆ. ಶಾಸಕಿ ರೂಪಾಲಿ ನಾಯ್ಕರವರಿಗೂ ಮಾತನಾಡಿ ರಸ್ತೆ ನಿರ್ಮಿಸಲು ಸೂಚಿಸಿದ್ದೇನೆ.
· ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ
ಅಂಕೋಲಾ ಬೆಳಸೆ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಹೋಗುವ ರಸ್ತೆ ಕುರಿತು ನಾನು ಈಗಾಗಲೇ ಗಮನಿಸಿದ್ದೇನೆ. ಇಲ್ಲಿಯ ರಸ್ತೆಯನ್ನು ಕಾಂಕ್ರಿಟ್ ರಸ್ತೆ ಮಾಡಲು ಸರಕಾರದಿಂದ 15 ಲಕ್ಷ ಮಂಜೂರಾಗಿದೆ. ಮಳೆಗಾಲ ಆಗಿರುವುದರಿಂದ ಈಗ ತಾತ್ಕಾಲಿಕ ರಸ್ತೆಯನ್ನು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ವಸತಿ ಶಾಲೆಗೆ ಹೊಗುವ ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು.
· ರೂಪಾಲಿ ನಾಯ್ಕ, ಶಾಸಕಿ