ಹೊನ್ನಾವರ: ತಾಲೂಕಾ ಸ್ಟುಡಿಯೋ ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಹಾಗೂ ಸರಕಾರಿ ಪ್ರೌಢಶಾಲೆ ಹಡಿನಬಾಳ ಇವರ ಸಹಯೋಗದಲ್ಲಿ 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಶಾಲಾ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯಾಧ್ಯಾಪಕರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಆರ್.ಟಿ ನಾಯ್ಕ ಮಾತನಾಡಿ,ಸರ್ಕಾರಿ ಶಾಲೆಗೆ ಸಹಾಯಹಸ್ತ ಹಾಗೂ ಅಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ನಿಜಕ್ಕು ಶ್ಲಾಘನೀಯ. ಇದು ಒಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ ಎಂದರು.
ಓರ್ವ ಛಾಯಾಚಿತ್ರಕಾರ ನಮ್ಮ ಸುಖದ ಜೀವನದ ಫೋಟೋ ಸೆರೆಹಿಡಿದು ನಮ್ಮ ಮೊಗದಲ್ಲಿ ನಗು ತರಿಸಲು ಅವರು ಶ್ರಮಿಸುತ್ತಾರೆ.ಈ ವೃತ್ತಿಯಲ್ಲಿರುವವರನ್ನು ನಾವೆಲ್ಲ ಅತ್ಯಂತ ಗೌರವಭಾವದಿಂದ ಕಾಣಬೇಕು ಎಂದರು.
ಕೆಪಿಎ ನಿರ್ದೇಶಕ ಮಂಜುನಾಥ ನಾಯ್ಕ ಮಾತನಾಡಿ, ಈ ವೃತ್ತಿಯನ್ನು ನಾವು ಏಲೆಮರೆಯ ಕಾಯಿಯಂತೆ ನಮ್ಮ ಕಷ್ಟ,ದಃಖ ಎಲ್ಲವನ್ನೂ ಮರೆತು ನಿರ್ವಹಿಸುತ್ತೇವೆ. ಫೋಟೋಗ್ರಫಿ ಎನ್ನುವುದಕ್ಕೆ ಬಹಳಷ್ಟು ಇತಿಹಾಸವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪಂ ಸದಸ್ಯ ಹಾಗೂ ಎಚ್ಪಿಎ ಹೊನ್ನಾವರ ಅಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ, ನಮ್ಮ ವೃತ್ತಿಯಲ್ಲಿ ಜಾತಿ,ಮತ,ಪಂಥ ಭೇಧ-ಭಾವವಿಲ್ಲ. ಛಾಯಾಗ್ರಾಹಕ ಸಂಗ್ರಹಿಸಿದ ಒಂದು ಫೋಟೋ ಕೂಡ ನ್ಯಾಯಾಲಯದಲ್ಲಿ ಸಾಕ್ಷಿಯಾಗುವ ಉದಾಹರಣೆ ಸಾಕಷ್ಟಿದೆ. ಈ ವೃತ್ತಿಯಲ್ಲಿರುವವರು ಇಂದು ಬಹಳಷ್ಟು ಕಷ್ಟ, ನೋವು ಅನುಭವಿಸುತ್ತಿದ್ದಾರೆ. ಗ್ರಾಹಕರಿಂದ ನಮ್ಮ ಕೆಲಸದ ಹಣ ಪಡೆಯಲು ಅವರ ಮನೆಬಾಗಿಲಿಗೆ ತೆರಳಬೇಕಾದ ಸ್ಥಿತಿ ಇದೆ ಎಂದರು.
ಕೆ.ಪಿ.ಎ. ಬೆಂಗಳೂರು ವತಿಯಿಂದ ಉತ್ತಮ ವಿಡಿಯೋಗ್ರಾಫರ್ ಪ್ರಶಸ್ತಿ ಪುರಸ್ಕೃತರಾದ ಎನ್.ಗಣಪತಿ, ಉತ್ತಮ ವಿಡಿಯೋ ಎಡಿಟರ್ ಪ್ರಶಸ್ತಿ ಪುರಸ್ಕೃತ ಗೌತಮ್ ವಿ.ನಾಯ್ಕ, ಉತ್ತಮ ಡಿಸೈನರ್ ಪ್ರಶಸ್ತಿ ಪುರಸ್ಕೃತ ಹರ್ಷ ಆರ್.ಆಚಾರ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮ ಅಂಗವಾಗಿ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆಗೆ ಹತ್ತು ಸಾವಿರ ಧನಸಹಾಯ ನೀಡಿದರು. ಚಿತ್ರಕಲಾ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಹೊನ್ನಾವರ ಪ,ಪಂ ಸದಸ್ಯ ಶ್ರೀಪಾದ ಜಿ. ನಾಯ್ಕ,ಶಾಲೆಯ ಹಿರಿಯ ಶಿಕ್ಷಕ ಶಂಕರ ಪಿ.ಹರಿಕಾಂತ, ಕುಮಟಾ ತಾಲೂಕಾ ಸ್ಟುಡಿಯೋ ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಗಜು ನಾಯ್ಕ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಲಕ್ಷ್ಮೀಶ ಭಂಡಾರಿ ಸ್ವಾಗತಿಸಿದರು. ಮೋಹನ್ ನಾಯ್ಕ ನಿರ್ವಹಿಸಿದರು. ಶಿಕ್ಷಕ ವಿಶ್ವನಾಥ ಗೌಡ ವಂದಿಸಿದರು.