ಯಲ್ಲಾಪುರ: ಸ್ವಾತಂತ್ರೋತ್ಸವದ 3 ದಿನಗಳ ಮೊದಲಿನಿಂದ ಮನೆಮನೆಗಳ ಮೇಲೆ ಹಾರಿಸಲು ನೀಡಲಾದ ಸುಮಾರು 4ಸಾವಿರ ಧ್ವಜಗಳನ್ನು ಪಟ್ಟಣ ಪಂಚಾಯಿತಿಯ ಸದಸ್ಯರು ಹಾಗೂ ಸಿಬ್ಬಂದಿ ಸಂಗ್ರಹಣೆ ಮಾಡುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ 3 ದಿನಗಳ ಕಾಲ ಪ್ರತಿ ಮನೆಯ ಮೇಲೆ ತಿರಂಗಾ ಹಾರಾಡಬೇಕು ಎನ್ನುವ ಉದ್ದೇಶದೊಂದಿಗೆ ಕರೆ ನೀಡಿದ್ದರು. ಈ ಕರೆಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿಯವರು, ಸುಮಾರು 4 ಸಾವಿರ ಧ್ವಜಗಳನ್ನು ಪಟ್ಟಣ ವ್ಯಾಪ್ತಿಯ ಎಲ್ಲ ಮನೆಗಳಿಗೆ ವಿತರಿಸಿದ್ದರು. ಪ್ರತಿಯೊಬ್ಬರೂ ಕೂಡ ಅತಿ ಉತ್ಸಾಹ ಹಾಗೂ ಗೌರವದಿಂದ ಮನೆ ಮೇಲೆ ಕಂಬ ಅಳವಡಿಸಿ ಪಟ್ಟಣ ಪಂಚಾಯಿತಿಯವರು ವಿತರಿಸಿದ್ದ ಧ್ವಜಗಳನ್ನು 3 ದಿನಗಳ ಕಾಲ ತಮ್ಮ ತಮ್ಮ ಮನೆಯ ಮೇಲೆ ಹಾರುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು.
ಮನೆಮನೆಗೆ ವಿತರಿಸಲಾಗಿದ್ದ ಧ್ವಜಗಳು ಸ್ವಾತಂತ್ರ್ಯೋತ್ಸವದ ನಂತರ ಎಲ್ಲಿಯೂ ಕೂಡ ಅಗೌರವಯುತವಾಗಿ ದುರ್ಬಳಕೆಯಾಗಬಾರದು ಎನ್ನುವ ಉದ್ದೇಶದಿಂದ ಪಟ್ಟಣ ಪಂಚಾಯಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ನೀಡಲಾದ ಧ್ವಜಗಳನ್ನು ಸಂಗ್ರಹಿಸುತ್ತಿದ್ದಾರೆ. ಪಟ್ಟಣದ ತಳ್ಳಿಕೇರಿ ವಾರ್ಡನಲ್ಲಿ ಪ.ಪಂ ಸದಸ್ಯೆ ಕಲ್ಪನಾ ನಾಯ್ಕ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗಜಾನನ ನಾಯ್ಕ ಹಾಗೂ ಇನ್ನಿತರ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ನೀಡಲಾದ ಧ್ವಜಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದೆ. ಹಾಗೆಯೇ ಬಹುತೇಕ ವಾರ್ಡ್ಗಳಲ್ಲಿ ಪ.ಪಂ ಸಿಬ್ಬಂದಿ ಹಾಗೂ ವಾರ್ಡ್ ಸದಸ್ಯರು ಮಂಗಳವಾರ ಬೆಳಿಗ್ಗೆಯಿಂದಲೆ ದ್ವಜವನ್ನು ಮರಳಿ ಪಡೆಯುತ್ತಿದ್ದಾರೆ.