ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ 9ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಿಂದ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳ ಬಳಕೆ ಮಾಡಿದ್ದಾರೆ.
ಈ ಹಿಂದಿನ ಭಾಷಣಗಳಲ್ಲಿ ಮೋದಿ ಅವರು ಟೆಲಿಪ್ರಾಂಪ್ಟರ್ ಬಳಕೆ ಮಾಡುತ್ತಿದ್ದರು. ನೋಡುವವರಿಗೆ ಅವರು ನೇರವಾಗಿ ತಮ್ಮನ್ನೇ ನೋಡುತ್ತಾ ಮಾತನಾಡುತ್ತಿದ್ದಾರೆ ಎನಿಸುವಂತೆ ಇರುತ್ತಿತ್ತು. ಆದರೆ ಈ ಬಾರಿ ಅವರು ಆಗಾಗ ಕಾಗದದ ಚೀಟಿಗಳನ್ನು ನೋಡುತ್ತಾ, ಭಾಷಣ ಮುಂದುವರಿಸಿದರು.
ಆಜಾದಿ ಕಾ ಅಮೃತ್ ಮಹೋತ್ಸವದ ಬ್ಯಾನರ್ ಅಡಿಯಲ್ಲಿ ದೇಶದಲ್ಲಿ ಆಚರಿಸಲಾಗುತ್ತಿರುವ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಟೆಲಿಪ್ರಾಂಪ್ಟರ್ ಅನ್ನು ಪಕ್ಕಕ್ಕೆ ಹಾಕಲಾಯಿತು.
ಐತಿಹಾಸಿಕ ಕೆಂಪು ಕೋಟೆಯ ಮೇಲೆ ಮೋದಿ ‘ತಿರಂಗ’ ಧ್ವಜವನ್ನು ಹಾರಿಸಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಸ್ವಾಗತಿಸಿದರು.
ಗಮನ ಸೆಳೆದ ಮೋದಿ ವಸ್ತ್ರ: ರಾಷ್ಟ್ರೀಯ ಧ್ವಜದ ಚಿತ್ರವಿರುವ ಪೇಟ, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಮೋದಿಯವರ ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್ ಹಾಗೂ ಅದಕ್ಕೊಪ್ಪುವ ವಿಶೇಷ ವಿನ್ಯಾಸದ ಪೇಟ ಗಮನ ಸೆಳೆಯಿತು. ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಗಮನವನ್ನು ಸೆಳೆಯುತ್ತವೆ.