ಕಾರವಾರ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಭಾರತೀಯ ಕೋಸ್ಟ್ ಗಾರ್ಡ್’ನಿಂದ ಮೋಟಾರ್ ಸೈಕಲ್ ರ್ಯಾಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಹಮ್ಮಿಕೊಂಡಿದ್ದ ಕೋಸ್ಟ್ ಗಾರ್ಡ್ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೋಸ್ಟ್ ಗಾರ್ಡ್ ಫ್ಲ್ಯಾಗ್ ಹಾರಿಸುವ ಮೂಲಕ ಚಾಲನೆ ನೀಡಿದರು. ಸುಮಾರು 10 ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ 20 ಮಂದಿ ಕೋಸ್ಟ್ ಗಾರ್ಡ್ ಹಾಗೂ ನೌಕಾ ಸಿಬ್ಬಂದಿ ತ್ರಿವರ್ಣ ಧ್ವಜ ಹಿಡಿದು ಬೈಕ್ ರ್ಯಾಲಿ ಹೊರಟರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಈ ಬೈಕ್ ರ್ಯಾಲಿ, ಅಂಕೋಲಾಕ್ಕೆ ತೆರಳಿ, ಅಲ್ಲಿಂದ ಮರಳಿ ಕಾರವಾರಕ್ಕೆ ಬಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಸಮಾಪ್ತಿಗೊಂಡಿತು.
ಅಂಕೋಲಾಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿದ ಬೈಕ್ ರ್ಯಾಲಿಯು ಸೂರ್ವೆಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ಅವರ ಮನೆಗೆ ತಲುಪಿತು. ಅಲ್ಲಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನಕ್ಕೆ ತೆರಳಿ, ಅಲ್ಲಿಂದ ಮರಳಿ ಮಧ್ಯಾಹ್ನದ ವೇಳೆಗೆ ಈ ಬೈಕ್ ಕಾರವಾರಕ್ಕೆ ಬಂದಿತು.