ಶಿರಸಿ:ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಧಿವಕ್ತಾ ಪರಿಷತ್ ಉತ್ತರ ಕನ್ನಡ ಘಟಕ, ಶಿರಸಿ ಹಾಗೂ ಎಂ.ಇ. ಎಸ್. ಕಾನೂನು ಮಹಾವಿದ್ಯಾಲಯ, ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಜು.3೦ ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾನೂನು ಕಾಲೇಜಿನಲ್ಲಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಶಿರಸಿ ಎಂ.ಇ. ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಶ್ಲಾಘನೀಯ. ಇತಿಹಾಸದಲ್ಲಿ ಮಾದರಿಯಾಗಿರುವ ವಕೀಲರುಗಳ ಆದರ್ಶವನ್ನು ಇಂದಿನ ವಕೀಲರು ಮೈಗೂಡಿಸಿಕೊಳ್ಳಬೇಕು, ವಕೀಲರು ವೃತ್ತಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ನೋಂದವರ ಧ್ವನಿಯಾಗಬೇಕು ಎನ್ನುತ್ತಾ ಅಧಿವಕ್ತಾ ಪರಿಷತ್ನ ಕಾರ್ಯವನ್ನು ಶ್ಲಾಘಿಸಿದರು.
“ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಶಿರಸಿಯ ಹಿರಿಯ ವಕೀಲರಾದ ಜಿ.ಎ.ಹೆಗಡೆ ಕಾಗೇರಿ ಮಾತನಾಡಿ “ಈಗಿನ ಕಾನೂನುಗಳಲ್ಲಿ ಹೆಚ್ಚಿನ ಕಾನೂನು ಬ್ರಿಟಿಷರ ಕಾನೂನುಗಳು, ಅವುಗಳು ಕಾಲ ಕಾಲಕ್ಕೆ ತಿದ್ದುಪಡಿಯಾಗಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ವಕೀಲರು ತೋರಿಸಿದ ಒಗ್ಗಟ್ಟು ಸಂಘಟನಾ ಹೋರಾಟವನ್ನು ನಾವು ಇಂದು ಅಳವಡಿಸಿಕೊಳ್ಳಬೇಕಾಗಿದೆ. ಅಂದು ಸಂಸತ್ತಿನಲ್ಲಿ ಶೇ 36% ರಷ್ಟು ಸಂಸದರು ವಕೀಲರಿದ್ದರು. ಇಂದು ಶೇ 4% ರಷ್ಟು ಇದ್ದಾರೆ. ಇಂದಿನ ವಕೀಲರು ವೈಯಕ್ತಿಕ ಹಿತಾಸಕ್ತಿಗಷ್ಟೇ ಬೆಲೆ ಕೊಡದೇ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನೂನು ಕಾಲೇಜಿನ ಪ್ರಾಚಾರ್ಯ ಅಶೋಕ ಭಟ್ಕಳ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಅಧಿವಕ್ತಾ ಪರಿಷತ್ನ ರಾಷ್ಟ್ರೀಯ ಘಟಕದ ಸದಸ್ಯರಾದ ಸರಸ್ವತಿ ಹೆಗಡೆ ಸ್ವಾಗತಿಸಿದರು. ಪರಿಷತ್ನ ಜಿಲ್ಲಾಧ್ಯಕ್ಷ ಸಂತೋಷ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಸತೀಶ ನಾಯ್ಕ ಔಢಾಳ ಕಾರ್ಯಕ್ರಮ ನಿರ್ವಹಿಸಿದರೆ ಕಾನೂನು ಕಾಲೇಜಿನ ವಿದ್ಯಾರ್ಥಿ ಈಶ್ವರ ವಂದಿಸಿದರು.