ಕುಮಟಾ: ಹಿಂದು ಕಾರ್ಯಕರ್ತ ಪ್ರವೀಣ ನೆಟ್ಟಾರ್ ಹತ್ಯೆಯನ್ನು ಖಂಡಿಸಿ, ತಪ್ಪಿದಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ತಾಲೂಕು ಮಂಡಲದಿಂದ ಗಿಬ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಗಿಬ್ ಸರ್ಕಲ್ನಲ್ಲಿ ಜಮಾಯಿಸಿದ ಬಿಜೆಪಿಯ ನೂರಕ್ಕೂ ಅಧಿಕ ಕಾರ್ಯಕರ್ತರು, ಸರ್ಕಲ್ನಿಂದ ತಹಸೀಲ್ದಾರ್ ಕಚೇರಿಯವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಿಂದು ಕಾರ್ಯಕರ್ತ ಪ್ರವೀಣ ನೆಟ್ಟಾರ್ ಹತ್ಯೆಯು ಹಿಂದುಗಳು ಮತ್ತು ದೇಶದ ಸಮಸ್ತ ಜನತೆ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಕೊಲೆಯಾಗಿರಬಹುದು. ಕನ್ನಯ್ಯಲಾಲ್ ಅವರ ಹತ್ಯೆ ಇರಬಹುದು. ಹೀಗೆ ದೇಶಾದ್ಯಂತ ಜಿಹಾದಿ ಮನಸ್ಥಿತಿಯ ಧರ್ಮಾಂಧರು ಮಾಡುತ್ತಿರುವ ದುಷ್ಕೃತ್ಯಗಳಿಂದ ಹಿಂದುಗಳಲ್ಲಿ ಭಯ ಹುಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಬೇಕು. ಮದರಸಗಳನ್ನು ತನಿಖೆಗೊಳಿಸಬೇಕು. ಕಾನೂನು ಬಾಹಿರ ಕೃತ್ಯವೆಸಗುವವರನ್ನು ಕೂಡಲೇ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಸರ್ಕಾರವನ್ನು ಆಗ್ರಹಿಸಿದರು. ಮನವಿಯನ್ನು ತಹಸೀಲ್ದಾರ್ ವಿವೇಕ ಶೇಣ್ವಿ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಸದಸ್ಯರಾದ ಮೋಹಿನಿ ಗೌಡ, ಸಂತೋಷ ನಾಯ್ಕ, ಶೈಲಾ ಗೌಡ, ಪ್ರಮುಖರಾದ ವಿನೋದ ಪ್ರಭು, ಪ್ರೊ. ಎಂ ಜಿ ಭಟ್, ನಾಗರಾಜ ನಾಯಕ ತೋರ್ಕೆ, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ಕುಮಾರ ಮಾರ್ಕಾಂಡೆ, ಗಜಾನನ ಗುನಗಾ, ರಾಮ ಮಡಿವಾಳ, ಕಿರಣ ಕಾಮತ್, ಮಂಜುನಾಥ ಪಟಗಾರ, ಗಣೇಶ ನಾಯ್ಕ, ಮಂಜುನಾಥ ಗುನಗಾ, ರಾಮಚಂದ್ರ ಹೆಗಡೆ, ಸೇರಿದಂತೆ ಬಿಜೆಪಿಯ ನೂರಕ್ಕೂ ಅಧಿಕ ಕಾರ್ಯಕರ್ತರು ಇದ್ದರು.