ಅಂಕೋಲಾ: ಪ್ರಪಂಚದ ಪ್ರತಿ ಜೀವಿಗಳಿಗೆ ಬದುಕಲು ಆಹಾರ ಅತೀ ಅಗತ್ಯ. ಇಂತಹ ಆಹಾರಕ್ಕೆ ನೀರು ಬೇಕು. ಬಣ್ಣ, ವಾಸನೆ, ರುಚಿಗಳಿಲ್ಲದ ಈ ನೀರಿನ ಸಂರಕ್ಷಣೆಗೆ ಅರಣ್ಯೀಕರಣ ಅನಿವಾರ್ಯ ಎಂದು ಕುಮಟಾದ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಹೆಗಡೆ ನುಡಿದರು.
ಅವರು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಸಂಗಮ ಸೇವಾ ಸಂಸ್ಥೆ ಹೊನ್ನಾವರ ಹಾಗೂ ಶರಧಿ ಇಕೋ ಕ್ಲಬ್ ಅಂಕೋಲಾ ಸಂಯುಕ್ತ ಆಶ್ರಯದಲ್ಲಿ ಜೈಹಿಂದ್ ಹೈಸ್ಕೂಲಿನಲ್ಲಿ ಏರ್ಪಡಿಸಲಾದ ‘ಮಳೆನೀರು ಕೊಯ್ಲು ಹಾಗೂ ಜಲಜಾಗೃತಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಫೆವಾರ್ಡ್ ಯು.ಕೆ. ಅಧ್ಯಕ್ಷರು, ಆಧಾರ ಸಂಸ್ಥೆ ಸಿದ್ದಾಪುರದ ನಾಗರಾಜ ನಾಯ್ಕ ಮಾಳ್ಕೋಡ, ಬದುಕು ರೂಪಿಸಲು ನೀರು ಅನಿವಾರ್ಯವಾದುದರಿಂದ ಮಿತವಾಗಿ ಬಳಕೆ ಮಾಡುವುದಲ್ಲದೇ ಸಾರ್ವಜನಿಕವಾಗಿ ನೀರು ಪೋಲು ಮಾಡುವುದನ್ನು ನಾವೆಲ್ಲ ತಡೆಯಬೇಕು ಎಂದು ನುಡಿದರು. ಜೈಹಿಂದ್ ಹೈಸ್ಕೂಲಿನ ಮುಖ್ಯೋಧ್ಯಾಯರಾದ ಪ್ರಭಾಕರ ಬಂಟ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಮೀನಾಕ್ಷಿ ಜಾಲಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಗೆ ತಿಮ್ಮಣ್ಣ ಭಟ್ ಬಿ. ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಮನೋಜ ಗುರವ, ಮನು ವಿಕಾಸ ಸಂಸ್ಥೆಯ ಗಣಪತಿ ಭಟ್, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.