ಹೊನ್ನಾವರ: ಜಿಲ್ಲೆಯಲ್ಲಿ ತಿಂಗಳ ಅಂತ್ಯದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿರುವುದು ದುರಂತ ಹಾಗೂ ನೋವಿನ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಜಿಲ್ಲೆಯ ಹೃದಯ ಭಾಗವಾಗಿರುವ ಕುಮಟಾದಲ್ಲಿ 15ರಿಂದ 20 ಎಕರೆ ಜಾಗ ಕಾಯ್ದಿರಿಸಲಾಗಿದೆ. ತಿಂಗಳಾದ್ಯಂತದಲ್ಲಿ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಬಳಿಕ ತೀರ್ಮಾನ ಪ್ರಕಟಿಸಲಾಗುವುದು. ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆಯೆ ಎನ್ನುವುದು ಆ ಬಳಿಕ ನಿರ್ಧಾರವಾಗಲಿದೆ ಎಂದರು.