ಸಿದ್ದಾಪುರ: ಜುಲೈ ಮೊದಲ ವಾರದಿಂದ ಮೂರನೇ ವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕೋಡ್ಸರ ಮುಠ್ಠಳ್ಳಿ ಗ್ರಾಮದ ಬಕ್ಕೇಮನೆ, ಸೀತಾಳಭಾವಿ ರಸ್ತೆ ಬಹುತೇಕ ನಾಶವಾಗಿದೆ. ಗ್ರಾಮದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಇದೇ ಆಗಿದ್ದು, ಸಂಪರ್ಕ ಕಡಿತಗೊಂಡಿರುವುದರಿಂದ ದೇವಸ್ಥಾನಕ್ಕೆ ತೆರಳುವ ಭಕ್ತರಿಗೂ ದಾರಿಯಿಲ್ಲದಂತಾಗಿದೆ.
ಮುಖ್ಯರಸ್ತೆಯಿಂದ ಕೇವಲ 600 ಮೀಟರ್ ಉದ್ದವಿರುವ ಈ ಇಳಿಜಾರು ರಸ್ತೆಯಲ್ಲಿ ಅಲ್ಲಲ್ಲಿ ಧರೆ ಕುಸಿದಿದೆ. ಜೊತೆಗೆ ಅಕ್ಕಪಕ್ಕ ಮಳೆ ನೀರಿನ ಚರಂಡಿ ಇಲ್ಲದಿರುವುದರಿಂದ ರಸ್ತೆ ಬಹುತೇಕ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ವಾಹನ ಸಂಚಾರವಷ್ಟೇ ಅಲ್ಲ, ನಡೆದುಕೊಂಡು ಹೋಗುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಇದು ಮುಖ್ಯರಸ್ತೆಯಿಂದ ಬಕ್ಕೇಮನೆ, ಸೀತಾಳಭಾವಿಗೆ ತೆರಳುವ ಹಳೆಯ ಅಧಿಕೃತ ರಸ್ತೆಯಾಗಿರುವುದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ.
600 ಮೀಟರ್ ಉದ್ದದ ಈ ರಸ್ತೆಯಲ್ಲಿ ಈಗಾಗಲೇ ಅರ್ಧ ದೂರಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇನ್ನರ್ಧ ರಸ್ತೆ ಕಚ್ಚಾ ರಸ್ತೆಯಾಗಿದ್ದು, ಅಲ್ಲೀಗ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯೂ ಬಳಕೆಗೆ ಸಿಗದಂತಾಗಿದೆ. ಆದ್ದರಿಂದ ಕೇವಲ 300-350 ಮೀಟರ್ ಮಾತ್ರ ಉಳಿದಿರುವ ಕಚ್ಚಾ ರಸ್ತೆಗೆ ಟಾರು ಅಥವಾ ಕಾಂಕ್ರೀಟ್ ಹಾಕಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
“ಭಾರೀ ಮಳೆಯಿಂದಾಗಿ ರಸ್ತೆ ಸಂಪೂರ್ಣ ನಾಶವಾಗಿದೆ. ವಾಹನ ಸಂಚಾರ ಹಾಗೂ ಕಾಲ್ನಡಿಗೆ ಕೂಡ ಸಾಧ್ಯವಾಗದಂತಾಗಿದೆ. ತುರ್ತು ಅಗತ್ಯಗಳಿಗೂ ಹೊರಹೋಗುವುದಕ್ಕೆ ಪರದಾಡುವ ಸ್ಥಿತಿಯಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ರಸ್ತೆಯನ್ನು ಸರಿಪಡಿಸಿ, ಆದಷ್ಟು ಬೇಗ ಇಲ್ಲಿಗೆ ಸರ್ವಋತು ರಸ್ತೆ ನಿರ್ಮಿಸಬೇಕು” ಎಂದು ಗ್ರಾಮಸ್ಥರಾದ ಸೀತಾಳಭಾವಿಯ ರಾಜೇಂದ್ರ ಭಟ್ ಮನವಿ ಮಾಡಿದ್ದಾರೆ.