ಹೊನ್ನಾವರ: ಮಹಿಳೆಯೋರ್ವಳಿಗೆ ಮೂವರು ವ್ಯಕ್ತಿಗಳು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ ಘಟನೆ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.
ರೂಪಾ ನಾಯ್ಕ ಹಲ್ಲೆಗೊಳಗಾದ ಮಹಿಳೆ. ಲೋಕೇಶ ಪೂಜಾರಿ, ಜಗದೀಶ ನಾಯ್ಕ ಹಾಗೂ ಇನ್ನೋರ್ವ ಅಪರಿಚಿತ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕೇಶ ಪೂಜಾರಿ ಹಗೂ ರೂಪಾ ನಾಯ್ಕ ಪರಸ್ಪರ ಚಿರಪರಿಚಿತರಾಗಿದ್ದರು. ಲೋಕೇಶ ಒಡೆತನದ ನರ್ಸರಿಯು ಕುಮಟಾ ತಾಲೂಕಿನ ಬಡಾಲ ಸಂತೆಗುಳಿಯ ದೋಣಿಹೊಳೆ ಗ್ರಾಮದಲ್ಲಿ 9 ಎಕರೆ ಜಮೀನಿನಲ್ಲಿದ್ದು, ರೂಪಾ ಅವರಿಗೆ ನರ್ಸರಿ ನೊಡಿಕೊಳ್ಳುವ ಜವಾಬ್ದಾರಿ ನೀಡಿದ್ದರು. ಕಳೆದ 6 ತಿಂಗಳಿಂದ ಕೆಲಸ ಮಾಡಿಕೊಂಡಿದ್ದರು. ನರ್ಸರಿಗೆ ಇನ್ನೋರ್ವ ಆರೋಪಿ ಜಗದೀಶ ನಾಯ್ಕ ಪಾಲುದಾರರಿದ್ದನು.
ಆರೋಪಿತ ಲೋಕೇಶ ನರ್ಸರಿಯಲ್ಲಿ ಬೇರೆ ಯಾರೋ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಪಾರ್ಟಿ ಮಾಡುವುದು, ಕಳ್ಳಬಟ್ಟಿ ತಯಾರಿಸುವುದು, ಬೇರೆ ಬೇರೆ ಕಡೆಯಿಂದ ಹುಡುಗಿಯರನ್ನು ಕರೆದುಕೊಂಡು ಬಂದು ಪಾರ್ಟಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಷಯ ರೂಪಾ ಅವರ ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಆರೋಪಿತ ಲೋಕೇಶನ ಪತ್ನಿಗೆ ರೂಪಾ ಕರೆ ಮಾಡಿ ತಿಳಿಸಿದ್ದರು. ಈ ವಿಷಯ ತಿಳಿದ ಆರೋಪಿತ ಲೋಕೇಶ, ರೂಪಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದ. ನಂತರ ಸಹಚರರೊಂದಿಗೆ ರೂಪಾ ಅವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಲಾಗಿದೆ.
ಇದರಿಂದ ರೂಪಾ ತನಗಾದ ಅವಮಾನದಿಂದ ಬೇಸರಗೊಂಡು ಮನೆಯಲ್ಲಿದ್ದ ಮಾತ್ರೆಗಳನ್ನು ತಿಂದು ಅಸ್ವಸ್ಥಗೊಂಡು ಒದ್ದಾಡುತ್ತಿದ್ದಳು. ಪತಿ ಗಜಾನನ ನಾಯ್ಕ ಅವರು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.