ಹೊನ್ನಾವರ: ಬ್ಯಾಂಕಿಗೆ ಬರುವ ಲಾಭಾಂಶದಲ್ಲಿ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಯಲ್ಲಿಯೂ ವಿನಿಯೋಗಿಸಲಾಗುವುದು ಎಂದು ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ಅಧ್ಯಕ್ಷ ವಿ.ಎನ್.ಭಟ್ ಹೇಳಿದರು.
ಅವರು ತಾಲೂಕಾ ಆಸ್ಪತ್ರೆಯಲ್ಲಿ ಪಿಎಲ್‌ಡಿ ಬ್ಯಾಂಕ್ ವತಿಯಿಂದ ನಾಲ್ಕು ವ್ಹೀಲ್ ಚೇರ್ ಮತ್ತು ನಾಲ್ಕು ಟ್ರಾಲಿಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಸರಕಾರಿ ಆಸ್ಪತ್ರೆ ಬಡವರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಚಿಕಿತ್ಸೆಯ ಕಾರಣದಿಂದ ಹೆಸರು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಕುಂದುಕೊರತೆಗಳಿಗೆ ಬ್ಯಾಂಕ ತನ್ನ ಇತಿಮಿತಿಯಲ್ಲಿ ಸ್ಪಂದಿಸಲಿದೆ ಎಂದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ ಕಿಣಿ, ನಮ್ಮ ಮನವಿಗೆ ತ್ವರಿತವಾಗಿ ಸ್ಪಂದಿಸಿ ಪಿಎಲ್‌ಡಿ ಬ್ಯಾಂಕಿನವರು ವೀಲ್ ಚೇರ್ ಮತ್ತು ಟ್ರಾಲಿಯನ್ನು ನೀಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಆಸ್ಪತ್ರೆಯ ವಿಚಾರವಾಗಿ ತ್ವರಿತವಾಗಿ ಸ್ಪಂದಿಸಿರುವುದು ನಿಜಕ್ಕೂ ಅಭಿನಂದನಾರ್ಹರು.ಅವರು ನೀಡಿರುವ ಈ ಕೊಡುಗೆ ಅಶಕ್ತ ರೋಗಿಗಳಿಗೆ ತುಂಬಾ ಅನೂಕೂಲವಾಗಲಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಯೋಗೇಶ ರಾಯ್ಕರ ಅನಿಸಿಕೆ ಹಂಚಿಕೊಂಡರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ರವಿ ಶೆಟ್ಟಿ, ಕೃಷ್ಣಾ ಗೌಡ, ರಾಜೇಂದ್ರ ನಾಯ್ಕ, ವಿ.ಕೆ.ವಿಶಾಲ, ರಾಜು ನಾಯ್ಕ, ರಾಘವೇಂದ್ರ ನಾಯ್ಕ ಗೋವಿಂದ ನಾಯ್ಕ, ಬ್ಯಾಂಕಿನ ವ್ಯವಸ್ಥಾಪಕ ಪಿ.ಎನ್.ಭಟ್ಟ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ, ವೈದ್ಯಾಧಿಕಾರಿ ಡಾ.ಮಹೇಶ ಶೆಟ್ಟಿ, ಡಾ.ಗುರುದತ್ತ ಕುಲಕರ್ಣಿ ಉಪಸ್ಥಿತರಿದ್ದರು.