ಹೊನ್ನಾವರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಬುಧವಾರ ನಡೆದ ಅಂಬ್ಯುಲೆನ್ಸ್ ಅಪಘಾತದಲ್ಲಿ ನಿಧನರಾದ ನಾಲ್ವರಲ್ಲಿ ಮೂವರ ಅಂತ್ಯಕ್ರಿಯೆ ಹಾಡಗೇರಿಯಲ್ಲಿ, ಓರ್ವರದ್ದು ಬಳ್ಕೂರ್‌ನಲ್ಲಿ ನಡೆಯಿತು.
ನಡೆದ ಅಂಬ್ಯುಲೆನ್ಸ್ ಅಪಘಾತದಲ್ಲಿ ತಾಲೂಕಿನ ಹಾಡಗೇರಿ ಗ್ರಾಮದ ಗಜಾನನ ನಾಯ್ಕ (45), ಲೋಕೇಶ್ ನಾಯ್ಕ (39), ಮಂಜುನಾಥ್ ನಾಯ್ಕ (42) ಹಾಗೂ ಜ್ಯೋತಿ ನಾಯ್ಕ (28) ಮೃತಪಟ್ಟಿದ್ದರು. ಘಟನೆಯಲ್ಲಿ ಅಂಬ್ಯುಲೆನ್ಸ್ ಚಾಲಕ ರೋಷನ್ ರೋಡ್ರಿಗೀಸ್, ಟೋಲ್ ಸಿಬ್ಬಂದಿ ಸಾಂಬಾಜಿ, ಶಶಿಕಾಂತ್ ಹಾಗೂ ಇನ್ನೋರ್ವರು ಗಾಯಗೊಂಡಿದ್ದರು.
ಮೃತ ನಾಲ್ವರೂ ಬಡ ಕುಟುಂಬದವರಾಗಿದ್ದು, ಇವರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು. ಇವರ ನಿಧನದಿಂದ ಮಕ್ಕಳು ಹಾಗೂ ನಂಬಿಕೊಂಡಿರುವ ಕುಟುಂಬದ ಇತರೆ ಸದಸ್ಯರಿಗೆ ದಿಕ್ಕೆ ತೋಚದಂತಾಗಿದೆ. ಗುರುವಾರ ಮುಂಜಾನೆ ಮೃತರ ಮನೆ ಬಳಿ ನೂರಾರು ಸಂಖ್ಯೆಯಲ್ಲಿ ಸಂಬಂಧಿಕರು, ಹಿತೈಷಿಗಳು ಅಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಅದರಲ್ಲಿ ಸಾವಿನಲ್ಲಿಯೂ ಒಂದಾದ ಗಂಡ- ಹೆಂಡತಿ ಅಂತ್ಯ ಸಂಸ್ಕಾರ ಹಾಗೂ ಚಿಕ್ಕ ಮಕ್ಕಳ ರೋಧನ ಕರಳು ಹಿಂಡುವಂತಿತ್ತು. ಇಡೀ ಹಾಡಗೇರಿ ಗ್ರಾಮವೇ ಸೂತಕದ ಛಾಯೆ ಕಂಡುಬಂತು.
ಅಂಬ್ಯುಲೆನ್ಸ್ ಚಾಲಕ ಪೊಲೀಸರ ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸರು ಅಂಬ್ಯುಲೆನ್ಸ್ ಚಾಲಕ ರೋಶನ್ ರೋಡ್ರಿಗೀಸ್‌ನನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.
ಅಂಬುಲೆನ್ಸ್ ಚಾಲನೆಯ ವೇಳೆ ಚಾಲಕ ಮದ್ಯಪಾನ ಮಾಡಿದ್ದ ಎನ್ನುವ ಆರೋಪದ ಹಿನ್ನಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಬೈಂದೂರು ಪೋಲಿಸರು ತಿಳಿಸಿದ್ದಾರೆ.
ಬುಧವಾರ ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಚಾಲಕ ರೋಶನ್, ಶಿರೂರು ಟೋಲ್ ಟ್ರ‍್ಯಾಕ್ ಬಳಿ ಆಕಳು ಮಲಗಿತ್ತು. ಅಲ್ಲದೇ ಟೋಲ್ ಟ್ರ‍್ಯಾಕ್ ಗೆ ಬ್ಯಾರಿಕೇಡ್ ಅಡ್ಡ ಇಟ್ಟಿದ್ದರು. ಅಂಬ್ಯುಲೆನ್ಸ್ ಬಂದ ಬಳಿಕ ಆಕಳುವನ್ನ ಎಬ್ಬಿಸಲು, ಬ್ಯಾರಿಕೇಡ್ ತೆಗೆಯಲು ಸಿಬ್ಬಂದಿ ಮುಂದಾದರು. ಆ ಕ್ಷಣದಲ್ಲಿ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಆಕಳು ತಪ್ಪಿಸಬೇಕು, ಟೋಲ್ ಸಿಬ್ಬಂದಿ ಉಳಿಸಬೇಕೆಂದು ತಕ್ಷಣ ಅಂಬ್ಯುಲೆನ್ಸ್ ಬ್ರೇಕ್ ಹೊಡೆದೆ. ಬ್ರೇಕ್ ಹೊಡೆಯದಿದ್ದರೆ ನಮ್ಮ ಅಂಬ್ಯುಲೆನ್ಸ್ ಪಲ್ಟಿಯಾಗುತ್ತಿತ್ತು, ಟೋಲ್ ಸಿಬ್ಬಂದಿಗೆ ಡಿಕ್ಕಿಯಾಗುತ್ತಿತ್ತು, ರೋಗಿಗಳಿಗೆ ಸಮಸ್ಯೆ ಆಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಅಂಬ್ಯುಲೆನ್ಸ್ ಸ್ಲಿಪ್ ಆಗಿ ಟೋಲ್ ಗೇಟ್‌ಗೆ ಬಡಿಯಿತು. ಟೋಲ್‌ನಲ್ಲಿ ಅವ್ಯವಸ್ಥೆಯಿಂದಾಗಿ ಅಪಘಾತವಾಗುವಂತಾಯಿತು ಎಂದು ದೂರಿದ್ದರು.