ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರೀಶೀಲನೆ ನಡೆಯಿತು.ಗ್ರಾಮ ಸಭೆಯಲ್ಲಿ ತೇಲಂಗಾರದಲ್ಲಿನ ಸೂರಲಮಕ್ಕಿ, ಪೆಡ್ಡೆಮನೆ ವಿದ್ಯುತ್ ಮಾರ್ಗದಲ್ಲಿ ಅಪಾಯದ ಕುರಿತು ,ತೇಲಂಗಾರದ ಭಾಗದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗ್ರಹಿಸಿ ಗಮನ ಸೆಳೆದಿದ್ದು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ತಿಳಿಸಿದರು. ಹಳೆಯ ವಿದ್ಯುತ್ ಮಾರ್ಗದ ಬದಲಾವಣೆಯ ಬಗೆಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಕಾಡು ಪ್ರಾಣಿಗಳ ಉಪಟಳ ಬಗೆಗೆ , ಹೊನ್ನಗದ್ದೆ ಅಂಗನವಾಡಿಯ ಸಹಾಯಕಿ ಹುದ್ದೆ ಕಳೆದ ಮೂರು ವರ್ಷಗಳಿಂದ ಖಾಲಿ ಇದ್ದು ಕ್ರಮ ಕೈಗೊಳ್ಳುವ ಬಗ್ಗೆ ಆಗ್ರಹಿಸಿದರು.
ಉದ್ಯೋಗ ಖಾತರಿ ಕಾಮಗಾರಿಯ ಕುರಿತು ,ಜಲಜೀವನ್ ಮಿಷನ್ನ್ ಯೋಜನೆಯ ಬಗೆಗೆ ಚರ್ಚೆಯಾಯಿತು. ಮಳೆ ಹಾನಿಯ ಕುರಿತು ಈಗಾಗಲೇ ಸಮೀಕ್ಷೆ ಮುಗಿದಿದ್ದು ಗಂಭೀರವಾದ ಪರಿಹಾರ ಸಿಗಬೇಕು .ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಠರಾವು ಮಂಡಿಸಲಾಯಿತು.
ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಕೀರ್ತಿ ಬಿ.ಎಂ., ಹೆಸ್ಕಾನಿಂದ ಲಕ್ಷಣ, ಪಶುಸಂಗೋಪನೆಯಿಂದ ಕೆ.ಜಿ.ಹೆಗಡೆ , ಅರಣ್ಯ ಇಲಾಖೆಯ ಕೆಂಚಪ್ಪ ಹಂಚಿನಾಳ, ಶಿಕ್ಷಣ ಇಲಾಖೆಯಿಂದ ಬಿಆರ್ ಸಿ ಪ್ರಭಾಕರ ಭಟ್ಟ ,ಕೃಷಿ ಇಲಾಖೆಯ ಪರ್ಮಿಳಾ .ಬಿ ತಮ್ಮ ಇಲಾಖೆಯ ಬಗೆಗೆ ಮಾಹಿತಿ ನೀಡಿದರು.
ಗ್ರಾಮಸಭೆಯ ನೋಡೆಲ್ ಅಧಿಕಾರಿ ನಾಗರಾಜ ನಾಯ್ಕ ಮಾತನಾಡಿ ಸಾರ್ವಜನಿಕರು ತಮ್ಮ ಬೇಡಿಕೆಗಳನ್ನು ಸ್ಥಳೀಯವಾಗಿ ಇರುವ ಅಧಿಕಾರಿಗಳ ಗಮನ ಸೆಳೆಯಬೇಕು. ಈ ಭಾಗವು ಕೃಷಿ ಉತ್ತೇಜಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರ್ಕಾರದ ಸವಲತ್ತುಗಳನ್ನು ಸುಲಭವಾಗಿ ಪಡೆಯುವ ಆಧುನಿಕ ತಂತ್ರಜ್ಞಾನ ರೈತರಿಗೆ ನೆರವಾಗಲಿದೆ ಎಂದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರವಹಿಸಿ ಮಾತನಾಡಿ ಜನಪರವಾದ ಯೋಜನೆಯ ಅನುಷ್ಠಾನವು ನಮ್ಮ ಜವಾಬ್ದಾರಿ ಯಾಗಿದ್ದು ಸಮಪರ್ಕವಾಗಿ ಪಂಚಾಯತದಿಂದ ನಿರ್ವಹಿಸಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ಇಲಾಖೆಯು ಸಹಕರಿಸಿ ಗ್ರಾಮೀಣ ಭಾಗದ ಸುಧಾರಣೆಗೆ ವಿಶೇಷವಾಗಿ ಮಹತ್ವ ಕೊಡಬೇಕಾಗಿದೆ ಎಂದರು. ಸಭೆಯಲ್ಲಿ ಪಂಚಾಯತ ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಸದಸ್ಯರಾದ ಗಜಾನನ ಭಟ್ಟ, ಜಿ ಆರ್ ಭಾಗ್ವತ, ಭಗೀರಥ ನಾಯ್ಕ, ತಿಮ್ಮಣ್ಣ ಗಾಂವ್ಕಾರ, ಗಂಗಾ ಕೋಮಾರ, ಲಲಿತಾ ಸಿದ್ಧಿ. ಪುಷ್ಪಾ ಆಗೇರ್, ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಸ್ವಾಗತಿಸಿದರು. ಕಾರ್ಯದರ್ಶಿ ದತ್ತಾತ್ರೇಯ ಆಚಾರಿ ವಾರ್ಡ ಸಭೆಯ ಬೇಡಿಕೆಗಳನ್ನು ಓದಿ ಹೇಳಿದರು.