ಕುಮಟಾ: ರಾಷ್ಟ್ರೀಯ, ಅಂತರರಾಷ್ಟ್ರೀಯ ಚೆಸ್ ಸ್ಪರ್ಧೆಗಳಲ್ಲಿ ವಿಜೇತ ದಿವ್ಯಾಂಗ ಚೆಸ್‌ಪಟು ಸಮರ್ಥ ಜೆ.ರಾವ್ ಅವರನ್ನು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಮರ್ಥರ ಸಾಧನೆಗಾಗಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಜುಲೈ 28ರಿಂದ ಅಗಸ್ಟ 10ರವರೆಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಂಪಿಯಾಡ್‌ಗೆ ಕ್ರೀಡಾಜ್ಯೋತಿಯನ್ನು ಸ್ವಾಗತಿಸುವ ಸಮಾರಂಭದಲ್ಲಿ ಸಮರ್ಥರನ್ನು ಆಮಂತ್ರಿಸಲಾಗಿತ್ತು.ಕರ್ನಾಟಕದ ಯುವ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಕರ್ನಾಟಕ ಓಲಂಪಿಕ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ.ಗೋವಿಂದರಾಜ್, ಯುವಜನ ಸೇವಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕ್ರೀಡಾ ಇಲಾಖೆಯ ಕಮಿಶನರ್ ಡಾ.ಎಚ್.ಎನ್. ಗೋಪಾಲಕೃಷ್ಣ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕ್ರೀಡಾಜ್ಯೋತಿ ಸ್ವಾಗತಿಸುವಲ್ಲಿ ಕೈಜೋಡಿಸಿದ ಸಮರ್ಥರನ್ನು ಕಂಡು ಪರಿಚಯಿಸಿಕೊಂಡು ಹತ್ತಿರ ಬಂದು ಸಾಧನೆಗಳಿಗಾಗಿ ರಾಜ್ಯಪಾಲರು ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಬಾಲ್ಯದಿಂದ ದೈಹಿಕ ಸಮಸ್ಯೆ ಇದ್ದರೂ ವಿದ್ಯಾಭ್ಯಾಸ ಮುಂದುವರಿಸುತ್ತ ಚೆಸ್ ಕಲಿಯುತ್ತ,ಸ್ಪರ್ಧೆಗಳಲ್ಲಿ ಗೆಲ್ಲುತ್ತ ಅಂತರಾಷ್ಟ್ರೀಯವಾಗಿ ಹೆಸರು ಮಾಡಿದ ಸಮರ್ಥ ಈಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಡಿಸ್ಟಿಂಕ್ಷನೊಂದಿಗೆ ಬಿಕಾಂ ಮುಗಿಸಿ ಎಂಕಾಂ ಓದುತ್ತಿದ್ದಾರೆ. 2015ರಲ್ಲಿ ದಿವ್ಯಾಂಗಿಗಳಿಗಾಗಿ ಏರ್ಪಡಿಸಿದ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, ಜಾಗತಿಕ ಸ್ಪರ್ಧೆಯಲ್ಲಿ ಕಂಚಿನ ಪದಕ, 2016ರಲ್ಲಿ ಪುನಃ ಕಂಚಿನ ಪದಕ, 2017ರಲ್ಲಿ ಕಂಚಿನ ಪದಕ, 2017ರಲ್ಲಿ ಪ್ಲೋವಾಕಿಯಾದಲ್ಲಿ ಚಿನ್ನದ ಪದಕ, 2017ರಲ್ಲಿ ಬೆಳ್ಳಿಯ ಪದಕ, 2015ರಲ್ಲಿ ಚಿನ್ನದ ಪದಕ, ರಾಜ್ಯಮಟ್ಟದಲ್ಲಿ ಚಾಂಪಿಯನ್, ಕರ್ನಾಟಕ ವಿವಿ ಬ್ಲೂಯ ಜಾಗತಿಕ ಆನ್‌ಲೈನ್ ಚೆಸ್ ಸ್ಪರ್ಧೆಯಲ್ಲಿ ವಿಜೇತ, ಕ್ಯಾಂಡಿಡೇಟ್ ಮಾಸ್ಟರ್ ವೀರಾಂಜನೇಯ ಪ್ರಶಸ್ತಿ, ಹವ್ಯಕ ಸಾಧಕ ರತ್ನ ಮೊದಲಾದ ಪ್ರಶಸ್ತಿಗಳು. ರೋಟರಿ ಕ್ಲಬ್, ಲಯನ್ಸ್ ಕ್ಲಬ್, ದೇಶಪಾಂಡೆ ಟ್ರಸ್ಟ್, ಮೊದಲಾದ ಸಂಘ ಸಂಸ್ಥೆಗಳಿಂದಲೂ ಸಮರ್ಥ ಗೌರವ ಪಡೆದಿದ್ದಾರೆ.
ಸಮರ್ಥರ ಸಹೋದರಿ ಸಾನ್ವಿ ಉತ್ತಮ ನೃತ್ಯ ಪಟು ಮಾತ್ರವಲ್ಲ ಅಣ್ಣನಿಗೆ ಲಿಪಿಕಾರಳೂ ಹೌದು. ತಂದೆ ಜಗದೀಶ ರಾವ್ ಬ್ಯಾಂಕ್ ಉದ್ಯೋಗಿ ಬಡ್ತಿಯನ್ನು ಬಿಟ್ಟು ತನ್ನ ಮಗನಿಗಾಗಿ ಬಹುಪಾಲು ಸಮಯ, ಶಕ್ತಿಯನ್ನು ವಿನಿಯೋಗಿಸುತ್ತಿದ್ದು ತಾಯಿ ವಿನುತಾ ಉದ್ಯೋಗಿ. ಮಗನಿಗೆ ಯಾವ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.