ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಕರ್ನಾಟಕವು 20,000 ಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮ ವಧೆಯಿಂದ ರಕ್ಷಿಸಿದೆ ಎಂದು ಪಶುಸಂಗೋಪಣಾ ಸಚಿವ ಪ್ರಭು ಚೌವ್ಹಾಣ್ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಅಕ್ರಮ ಸಾಗಣೆ ಮತ್ತು ಗೋಹತ್ಯೆ ಮತ್ತು ಇತರ ನಿಷೇಧಿತ ಪ್ರಾಣಿಗಳ ಹತ್ಯೆಗಾಗಿ 900 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
”ಗೋಹತ್ಯೆ ನಿಷೇಧ ಕಾಯಿದೆ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪಶು ಸಹಾಯವಾಣಿ ಕೇಂದ್ರ ಸ್ಥಾಪನೆ, 400 ಪಶುವೈದ್ಯರ ನೇಮಕಾತಿ, 250 ಗೋ ನಿರೀಕ್ಷಕರ ನೇಮಕಾತಿ, ಗೋಮಾತಾ ಸಹಕಾರಿ ಸಂಘ, ಪುಣ್ಯಕೋಟಿ ದತ್ತು ಯೋಜನೆ ಹಾಗೂ ಗೋಶಾಲೆಗಳನ್ನು ಸ್ವಾವಲಂಬಿಯಾಗಿ ಪರಿವರ್ತಿಸುವ ಕೆಲಸವನ್ನು ರಾಜ್ಯದಲ್ಲಿ ದೇಶದಲ್ಲೇ ಪ್ರಥಮವಾಗಿ ನಡೆಸಲಾಗಿದೆ” ಎಂದು ಚೌಹಾಣ್ ಹೇಳಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಬಕ್ರೀದ್ ಹಬ್ಬದ ಮುನ್ನಾದಿನದಂದು ಅಕ್ರಮ ಗೋಸಾಗಾಟ, ವಧೆಗೆ ಸಂಬಂಧಿಸಿದಂತೆ ಸುಮಾರು 67 ಜನರನ್ನು ಬಂಧಿಸಲಾಗಿದೆ ಮತ್ತು 707 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ.
“ನಮ್ಮ ಏಕೈಕ ಗುರಿ ಗೋ ಮಾತೆಯ ರಕ್ಷಣೆ. ಕರ್ನಾಟಕದಲ್ಲಿ ಅಕ್ರಮ ಕಸಾಯಿಖಾನೆಗಳು ಅಸ್ತಿತ್ವ ಕಳೆದುಕೊಳ್ಳಬೇಕು. ರಾಜ್ಯದಲ್ಲಿ ಸ್ವಾವಲಂಬಿ ಗೋಶಾಲೆಗಳನ್ನು ಸೃಷ್ಟಿಸುವ ಯೋಜನೆ ಇದೆ. ಗೋಬರ್ ಗ್ಯಾಸ್ (ಬಯೋಗ್ಯಾಸ್) ಉತ್ಪಾದಿಸಲು ನಿರ್ಧರಿಸಲಾಗಿದ್ದು, ರೈತರಿಗೆ ಪ್ರತಿ ಕೆಜಿ ಹಸುವಿನ ಸಗಣಿಗೆ 2 ರೂ ನೀಡಿ ಖರೀದಿ ಮಾಡುತ್ತೇವೆ. ನಾವು ಈ ವಿಷಯವನ್ನು ಗಂಭೀರವಾಗಿ ಚರ್ಚಿಸುತ್ತಿದ್ದೇವೆ” ಎಂದು ಚೌವ್ಹಾಣ್ ಹೇಳಿದ್ದಾರೆ.
ಕೃಪೆ-https://news13.in/