ಶಿರಸಿ: ನಗರದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಇಲ್ಲಿನ ಹೊಸಪೇಟೆ ರಸ್ತೆಯ ಒತ್ತಡ ತಗ್ಗಿಸಿ ಟ್ರಾಫಿಕ್ ಜ್ಯಾಂ ನಿಯಂತ್ರಿಸಲು ಪೊಲೀಸರು ಹಾಗೂ ನಗರಸಭೆಯಿಂದ ಜಂಟಿ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.
ಜನ ನಿಬಿಡ ಪ್ರದೇಶವಾಗಿ ಮಾರ್ಪಾಟು ಆಗುತ್ತಿರುವ ಹೊಸಪೇಟೆ ರಸ್ತೆಯಲ್ಲಿ ಎರಡೂ ಪಾರ್ಶ್ವದಲ್ಲಿ ವಾಹನ ನಿಲ್ಲಿಸಲು ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಲು ಯೋಜಿಸಲಾಯಿತು. ಕೆಲವು ಕಡೆ ಬೈಕ್ ನಿಲ್ಲಿಸಲೂ ಸ್ಥಳ ಇಲ್ಲವಾಗಿದ್ದು, ಅಲ್ಲಿ ಗಟಾರದ ಮೇಲೆ ಕಲ್ಲು ಹಾಸು ಹಾಕಿಸಿ ಅನುಕೂಲ ಮಾಡಿಕೊಡಲೂ ತೀರ್ಮಾನ ಕೈಗೊಳ್ಳಲಾಯಿತು. ಡಾಂಬರ್ ರಸ್ತೆಯ ಇಕ್ಕೆಲದಲ್ಲಿ ಬಳಿಯಲಾದ ಬಿಳಿ ಪಟ್ಟಿಯ ಪಕ್ಕ ವಾಹನ ನಿಲ್ಲಿಸಬಹುದು. ಇದರ ಸಾಧಕ ಬಾಧಕ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇರುವ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು. ಭಗತ್ ಸಿಂಗ್ ರಸ್ತೆ ಒನ್ ವೇ ಮಾಡಲಾಗುತ್ತದೆ. ಇದರಿಂದ ಆ ಮಾರ್ಗದ ಒತ್ತಡ ಕೂಡ ಕಡಿಮೆ ಮಾಡುವುದು ನಮ್ಮ ಆಶಯ. ಮರಾಠಿಕೊಪ್ಪದ ಕಡೆಯಿಂದ ದೇವಿಕೆರೆಗೆ ಬರಬಹುದು. ತೆರಳುವವರು ಹೊಸಪೇಟೆ ಮಾರ್ಗ ಬಳಸಬೇಕು ಎಂದು ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ತಿಳಿಸಿದರು. ಮಧುವನ ಎದುರುಗಡೆ ಯಲ್ಲಾಪುರ ನಾಕಾ ಕಡೆ ತೆರಳುವಾಗ ಎಡಗಡೆ ಪಾರ್ಕಿಂಗ್ ಮಾಡಬಹುದು ಎಂದೂ ಡಿಎಸ್ಪಿ ತಿಳಿಸಿ, ಹೊಸಪೇಟೆ ರಸ್ತೆಯಲ್ಲಿ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಸಿಬ್ಬಂದಿ ಕೂಡ ನೇಮಕ ಮಾಡುವುದಾಗಿ ಹೇಳಿದರು.
ಈ ವೇಳೆ ಸಿಪಿಐ ರಾಮಚಂದ್ರ ನಾಯಕ, ಪೌರಾಯುಕ್ತ ಕೇಶವ ಚೌಗಲೆ ಇತರರು ಇದ್ದರು. ಇದೇ ವೇಳೆ ಸ್ಥಳೀಯರು ಸಮಸ್ಯೆ ಹಾಗೂ ನಿವಾರಣಾ ಕ್ರಮದ ಬಗ್ಗೆ ಮಾತನಾಡಿದರು.