ಹೊನ್ನಾವರ:75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಬೂಸ್ಟರ್ ಲಸಿಕೆ ನೀಡುವ ಅಭಿಯಾನಕ್ಕೆ ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಚಾಲನೆ ನೀಡಲಾಯಿತು.
ಇಲ್ಲಿಯ ಕೋವೀಡ್ ಲಸಿಕಾ ಕೇಂದ್ರದಲ್ಲಿ ಅರ್ಹ ಪಲಾನುಭವಿಗಳಿಗೆ ಬೂಸ್ಟರ್ ಲಸಿಕೆ ನೀಡುವದರ ಮೂಲಕ ಚಾಲನೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ.ಪ್ರಕಾಶ ನಾಯ್ಕ ರವರು ಮಾತನಾಡಿ, ಸಾರ್ವಜನಿಕರು ಕೋವೀಡ್ ಬಗ್ಗೆ ಉದಾಸಿನತೆ ತೋರದೆ ಬೂಸ್ಟರ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ತೊಂದರೆಯಿಂದ ಪಾರಾಗಲು ಬೂಸ್ಟರ್ ಲಸಿಕೆಯಿಂದ ಸಾಧ್ಯ ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಮಾತನಾಡಿ, ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ ಉಚಿತವಾಗಿ ಲಭ್ಯವಿದ್ದು, ಅಗಷ್ಟ 15 ರವರೆಗೆ ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆಯದಿದ್ದವರು ಬಂದು ಲಸಿಕೆ ಪಡೆದುಕೊಳ್ಳಬೇಕು. ಕರೋನಾ ತಡೆಗಟ್ಟುವ ಪ್ರಯತ್ನದಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳುವುದು ಮುಖ್ಯವಾಗಿದೆ. ಕೋವಿಡ್‌ನಿಂದ ಜೀವ ಹಾನಿಯಾಗುವದನ್ನು ತಪ್ಪಿಸಲು ಲಸಿಕೆ ಪಡೆದುಕೊಳ್ಳುವದು ಒಂದೇ ಮಾರ್ಗ, ಆದ್ದರಿಂದ ದಯವಿಟ್ಟು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ಉಪಸ್ಥಿತರಿದರು. ಶುಶ್ರೂಷಾಧಿಕಾರಿ ಹೇಮಾವತಿ ಮತ್ತು ಡಾಟಾ ಎಂಟ್ರಿ ಆಪರೇಟರ್ ತೇಜಾ ಹಾಜರಿದ್ದು, ಲಸಿಕಾ ಅಭಿಯಾನಕ್ಕೆ ಸಹಕರಿಸಿದರು.