ಸಿದ್ದಾಪುರ: ಪಟ್ಟಣದ ಹೊಸೂರು ಶ್ರೀ ಬಂಕೇಶ್ವರ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರಸಮಾಲೋಚಕರಾದ ಶಿವಶಂಕರ್ ಎನ್.ಕೆ. ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಹೆಚ್ಚೆಚ್ಚು ಬಳಸುವುದಕ್ಕಿಂತ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದಿನ ಕಡೆಗೆ ಹೆಚ್ಚಿನ ಗಮನವನ್ನು ನೀಡಿ ಜೀವನದ ಮುಂದಿನ ಗುರಿ ಮುಟ್ಟುವಲ್ಲಿ ಪ್ರಯತ್ನಿಶೀಲರಾಗಬೇಕು ಎಂದರು.ವಿದ್ಯಾರ್ಥಿಗಳಿಗೆ ಉಳಿತಾಯ ಮತ್ತು ಶೈಕ್ಷಣಿಕ ಸಾಲ ಸೌಲಭ್ಯಗಳು ಉದ್ಯೋಗ ತರಬೇತಿಗಳು ಸೇರಿದಂತೆ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಧ್ಯಾಪಕರಾದ ಲೋಕೇಶ ನಾಯ್ಕ ಮಾತನಾಡಿ ಶಾಲೆಯ ನಿಯಮದಂತೆ ನಡೆದು ಮಾದರಿಯಾಗಬೇಕು. ನಿಮ್ಮ ಆದರ್ಶ ಇತರರು ಪಾಲಿಸುವಂತಾಗಬೇಕು. ಮಕ್ಕಳು ಪಠ್ಯ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಶಾಲೆಯ ಹಿರಿಮೆ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೇವೇಂದ್ರ ನಾಯ್ಕ, ರವೀಂದ್ರ ನಾಯ್ಕ, ಕಮಲಾಕ್ಷಿ ಆರ್., ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತಿಸಲಾಯಿತು. ಕುಮಾರಿ ನಯನ ಸಂಗಡಿಗರು ಪ್ರಾರ್ಥನೆ ಗೀತೆಹಾಡಿದರು. ಶಿಕ್ಷಕರಾದ ಟಿ.ಸಿ.ನಾಯ್ಕ ಸ್ವಾಗತಿಸಿದರು. ಎಂ.ಬಿ.ನಾಯ್ಕ ನಿರೂಪಿಸಿದರು. ವಿ.ಟಿ.ನಾಯ್ಕ ವಂದಿಸಿದರು.