ಹೊನ್ನಾವರ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೋಟ, ಗದ್ದೆ ಹಾಗೂ ನೂರಾರು ಮನೆಗಳಿಗೆ ನೀರು ನುಗ್ಗಿದೆ.
ತಾಲೂಕಿನ ಗುಂಡಬಾಳ ನದಿಪಾತ್ರದಲ್ಲಿರುವ ಗುಂಡಿಬೈಲ್ ಚಿಕ್ಕನಕೋಡ್, ಹೆಬೈಲ್, ಹಡಿನಬಾಳ, ಕಡಗೇರಿಯ 300ಕ್ಕೂ ಅಧಿಕ ಕುಟುಂಬಗಳು ಪ್ರವಾಹದ ಸಂಕಷ್ಟ ಎದುರಾಗಿದ್ದು, ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಈ ಭಾಗದಲ್ಲಿ ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯ ಗುಂಡಿಬೈಲ್ ಮತ್ತು ಹೆಬೈಲ್ ಭಾಗದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಬಡಗಣೆ ನದಿಯಿಂದ ಹಳದೀಪುರ, ಕಡತೋಕಾ ಭಾಗದ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ನವಿಲಗೋಣ ಭಾಗದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಭಾಸ್ಕೇರಿ ಹೊಳೆಯಿಂದ ಗಜನಿಕೇರಿ, ಭಾಸ್ಕೇರಿ, ವರ್ನಕೇರಿ ಸೇರಿದಂತೆ ವಿವಿಧಡೆ ನೀರು ನುಗ್ಗಿದೆ. ಕರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಪ್ಪಲಕೇರಿ, ಹೆಗಡೆಹಿತ್ಲ ನಡುಚಿಟ್ಟೆ ಮಠದಕೇರಿ ಸಮುದ್ರ ತೀರದ ಪ್ರದೇಶವಾಗಿದ್ದು, ಕಡಲಕೊರೆತದಿಂದ ಸಮುದ್ರದ ನೀರಿನ ಜೊತೆ ಸರಾಗವಾಗಿ ಮಳೆ ನೀರು ನದಿ ಮೂಲಕ ಸಮುದ್ರ ಸೆರದೇ ಪ್ರವಾಹ ಉಂಟಾಗಿ ಸಮಸ್ಯೆ ಉಂಟಾಗಿದೆ.
ಗುಡ್ಡೆಬಾಳ ಭಾಗದ ಶ್ರೀಧರ ಹೆಗಡೆ ಇವರ ಮನೆ ಸಮೀಪ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಮನೆಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ಕಾಸರಕೋಡ್ ಟೊಂಕಾ ಭಾಗದಲ್ಲಿ ಕಡಲಕೊರೆರಲತ ಹಾಗೂ ಮಳೆಯಿಂದಾಗಿ ಕೆಲ ಮನೆಗಳಿಗೆ ಒಮ್ಮೆಲ್ಲೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.