ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದ ನಿರಂತರ ಹೋರಾಟದ ಹಾದಿಯಲ್ಲೇ ಸಾಗಿದ್ದ ಭಾರತ, ಸ್ವಾತಂತ್ರ್ಯಾ ನಂತರದ ಏಕೀಕರಣದ ಅನಿವಾರ್ಯತೆಯಿಂದ ವಿವಿಧ ಪ್ರಯತ್ನಗಳನ್ನು ವಿವಿಧ ಹಂತಗಳಲ್ಲಿ ಮಾಡುತ್ತಲೇ ಬಂತು. ಒಂದೆಡೆ ರಾಜಕೀಯದಲ್ಲಿ ಆಗಬೇಕಿದ್ದ ಸುಧಾರಣೆ, ಮತ್ತೊಂದೆಡೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸುವ ಕಾರ್ಯ. ಈ ಸಂದರ್ಭದಲ್ಲಿ, ವಿದೇಶಿ ಸಂಸ್ಕೃತಿಯು ಪ್ರತಿಯೊಂದು ಕ್ಷೇತ್ರದಲ್ಲೂ ರಾರಾಜಿಸುತ್ತಿದ್ದಾಗ, ಶೈಕ್ಷಣಿಕ ಕ್ಷೇತ್ರದಲ್ಲಿ ಬಂದೊದಗಿದ್ದ ಈ ಪಿಡುಗನ್ನು ದೂರ ಮಾಡುವ ಮಹದುದ್ದೇಶದಿಂದ ಸಮಾನ ಮನಸ್ಕ ರಾಷ್ಟ್ರೀಯವಾದಿಗಳು ಸೇರಿ, 1948ರಲ್ಲಿ ಒಂದು ಚಳುವಳಿಗಾಗಿ ಪೂರ್ವಭಾವಿ ಸಿದ್ಧತೆಗಳನ್ನು ಪ್ರಾರಂಭಿಸಿದರು.ವಿಶ್ವಗುರು, ಜಗದ್ವಂದ್ಯ, ಪ್ರಾಚೀನ ರಾಷ್ಟ್ರ ಭಾರತದ ಸನಾತನ ಸಂಸ್ಕೃತಿ, ನಾಗರಿಕತೆ, ಚಿಂತನೆಗಳನ್ನು ರಾಷ್ಟ್ರದ ಪ್ರತಿಯೊಬ್ಬ ವಿದ್ಯಾರ್ಥಿಯ ಸ್ಮೃತಿ ಪಟಲದಲ್ಲಿ ಅಚ್ಚೊತ್ತಬೇಕು, ವಿದೇಶಿ ಜಂಜಾಟದಿಂದ ಹೊರಬಂದು, ಶ್ರೇಷ್ಠ ಚಿಂತನೆಗಳ ವಾರಸುದಾರರಾಗಬೇಕು ಎಂಬ ನಿಟ್ಟಿನಲ್ಲಿ 1949 ಜುಲೈ 9ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂಬ ರಾಷ್ಟ್ರ ಕಾರ್ಯ ಪ್ರಾರಂಭವಾಯಿತು.
ಒಂದು ದೇಶದ ಆಗುಹೋಗುಗಳಲ್ಲಿ ಕೇವಲ ಅನುಭವಸ್ಥರು, ಹಿರಿಯರು ಪಾತ್ರವಹಿಸದೆ, ವಿದ್ಯಾರ್ಥಿಗಳೂ ಅದರಲ್ಲಿ ಪಾಲ್ಗೊಳ್ಳುವರು ಎಂಬುವುದಕ್ಕೆ ಅಭಾವಿಪ ನಡೆದು ಬಂದ ದಾರಿಯೇ ಉದಾಹರಣೆ. ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ರಾಷ್ಟ್ರ ಪುನರ್ ನಿರ್ಮಾಣದ ಅನಿವಾರ್ಯತೆ ಒದಗಿ ಬಂದಾಗ, ಆ ಕಾರ್ಯದಲ್ಲಿ ಟೊಂಕ ಕಟ್ಟಿ ನಿಂತ ಒಂದೇ ಒಂದು ವಿದ್ಯಾರ್ಥಿ ಸಂಘಟನೆ ಅಭಾವಿಪ.
ಇಂದಿನ ವಿದ್ಯಾರ್ಥಿ ನಾಳೆಯ ಪ್ರಜೆಯಲ್ಲ, ‘ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ’ ಎಂಬ ಉದ್ಘೋಷದೊಂದಿಗೆ, ಸಮಾಜದ ಪ್ರತಿ ಆಗುಹೋಗುಗಳಿಗೆ, ನಂಬಿ ಬಂದ, ನಡೆದು ಬಂದ ಸಿದ್ಧಾಂತದ ಅಡಿಯಲ್ಲಿ ಪರಿಹಾರವನ್ನು ರಚನಾತ್ಮಕವಾಗಿ,ಆಂದೋಲನಾತ್ಮಕವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ ಕಂಡುಕೊಂಡಿದೆ.ಈ ‘ದೇಹವೇನಿದ್ದರೂ ದೇಶ ಸೇವೆಗಾಗಿ’, ‘ದೇಶದಿಂದಾಗಿ ನಾನು ಆದ್ದರಿಂದ ದೇಶಕ್ಕಾಗಿ ನಾನು’ ಎಂಬ ಉದಾತ್ತ ಚಿಂತನೆಯೊಂದಿಗೆ ಭಾರತದ ವಿಕಾಸದಲ್ಲಿ ಕಳೆದ 73 ವರ್ಷಗಳಿಂದ ಅನನ್ಯ ಕೊಡುಗೆಗಳನ್ನು ಪರಿಷತ್ ನೀಡಿದೆ.
ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು, ಗುರುತ್ರಯರು ಸಾರಿದ ‘ವಸುಧೈವ ಕುಟುಂಬಕಂ’ ಎಂದು ವಿಶ್ವದ ಕಲ್ಯಾಣವನ್ನೇ ಬಯಸುವ ಸಂಘಟನೆಯಾಗಿ, ಅಂಬೇಡ್ಕರ್ ರವರ ಸಾಮರಸ್ಯ, ಛತ್ರಪತಿ ಶಿವಾಜಿಯವರ ಸಾವರ್ಕರ್, ಭಗತ್ ಸಿಂಗ್, ರಾಜಗುರು, ಸುಖದೇವ್, ಬೋಸರು,ತಿಲಕ್ ಆದಿ ಎಲ್ಲಾ ರಾಷ್ಟ್ರಸೇವಕರ ವೀರ ಕಲಿಗಳ ಸಂದೇಶಗಳನ್ನು ಪ್ರತಿ ಕಾರ್ಯಕರ್ತನಲ್ಲಿ ಬಿತ್ತುವ ಕಾರ್ಯದಲ್ಲಿ ನಿರತವಾಗಿದೆ ವಿದ್ಯಾರ್ಥಿ ಪರಷತ್.ವ್ಯಕ್ತಿತ್ವ ವಿಕಸನ ಶಿಬಿರ, ಶ್ರಮಾನುಭವ ಶಿಬಿರ, ಜಯಂತಿಗಳ ಆಚರಣೆಯ ಮೂಲಕ ಒಬ್ಬ ಸಮಾಜಮುಖಿ ವ್ಯಕ್ತಿಯನ್ನು ‘ರಚನಾತ್ಮಕವಾಗಿಯೂ’, ಶೈಕ್ಷಣಿಕ ರಾಷ್ಟ್ರೀಯ ಸ್ಥಳೀಯ ಸಮಸ್ಯೆಗಳ ಕುರಿತು ಜನಜಾಗರಣ ಹೋರಾಟ ಮಾಡಿ ಅನ್ಯಾಯದ ವಿರುದ್ಧ ಪ್ರತಿಭಟನಾ ಮನೋಭಾವದ ವಿದ್ಯಾರ್ಥಿಯನ್ನು ‘ಆಂದೋಲನಾತ್ಮಕವಾಗಿಯೂ’,ಸಮಾನ ಮನಸ್ಕ ಯುವ ಸಮೂಹವನ್ನು, ವಿದ್ಯಾರ್ಥಿ ಸಂಘವನ್ನು ಪ್ರತಿನಿಧಿಸುವ ನಾಯಕನನ್ನು ‘ಪ್ರಾತಿನಿಧ್ಯಾತ್ಮಕವಾಗಿಯೂ’, ತಾಯಿ ಭಾರತಾಂಬೆಯ ಸೇವೆಗಾಗಿ ಸಜ್ಜುಗೊಳಿಸುತ್ತಾ ಬಂದಿದೆ ಅಭಾವಿಪ.
ಸತ್ವ, ಸ್ವಾಭಿಮಾನ ಭರಿತ,ಶಕ್ತಿವಂತ ರಾಷ್ಟ್ರದ ನಿರ್ಮಾಣ ಆಗುವುದು ವ್ಯಕ್ತಿ ನಿರ್ಮಾಣವಾದಾಗ ಮತ್ತು ವ್ಯಕ್ತಿನಿರ್ಮಾಣವಾಗುವುದು, ಭಾರತದ ಶಾಲೆಗಳಲ್ಲಿ, ಕಾಲೇಜುಗಳಲ್ಲಿ,ಮತ್ತು ವಿಶ್ವವಿದ್ಯಾಲಯಗಳಲ್ಲಿ. ವ್ಯಕ್ತಿ ನಿರ್ಮಾಣವಾಗಬೇಕಿದ್ದ ವಿಶ್ವವಿದ್ಯಾಲಯಗಳಲ್ಲಿ, ಯಾವ ಕೆಂಪುವರ್ಣದ ಕೆಂಪು ಸಿದ್ದಾಂತ ತಾಂಡವವಾಡುತ್ತಿತ್ತೋ, ಆಂಗ್ಲರ ಬೂಟು ಕಾಲಿನ ಸಂಸ್ಕೃತಿಗೆ ತಲೆಬಾಗುವ ಮಾನಸಿಕತೆ ತಲೆ ಎತ್ತಿತ್ತೋ ಮತ್ತು ಸ್ವಾಭಿಮಾನದ ಸ್ವಾವಲಂಬನೆಯ ಅವಶ್ಯಕತೆಯ ಚಿಂತನೆ ತಲೆ ಹತ್ತಲಿಲ್ಲವೋ ಅಂತಹ ಸಂದರ್ಭದಲ್ಲಿ ರಾಷ್ಟ್ರವಾದಿ ಮನಸ್ಸುಗಳಿಗೆ ಒಂದು ಆಶಾ ಜ್ಯೋತಿಯಾಗಿ ಉದಯಿಸಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.
ತನ್ನ 73 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಮಾಜದ ಎಲ್ಲ ಸ್ತರದ ಜನರ ಬೇಕು ಬೇಡುಗಳಿಗೆ ಸ್ಪಂದಿಸಿ, ಶೈಕ್ಷಣಿಕವಾಗಿಯೂ, ಸಾಮಾಜಿಕವಾಗಿಯೂ ‘ಸರ್ವಂ ಸ್ವರಾಷ್ಟ್ರಾಯ, ನ ಇದಂ ಮಮ’ ಎಂಬ ನಿಟ್ಟಿನಲ್ಲಿ ಸದಾ ವಿಶಾಲವಾಗಿ ಚಿಂತಿಸಿ, ಮುಂದಡಿ ಇಟ್ಟಿದೆ ವಿಶ್ವದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ. 33 ಲಕ್ಷಕ್ಕೂ ಹೆಚ್ಚು ಸದಸ್ಯ ಕಾರ್ಯಕರ್ತರನ್ನು ಹೊಂದಿ, ಪ್ರತಿಯೊಬ್ಬ ಕಾರ್ಯಕರ್ತನ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾ, ಮಾತೃ ಸಂಘಟನೆ ತೋರಿದ ದಿಶೆಯಲ್ಲಿ ತನ್ನದೇ ಆದ ರೀತಿ-ನೀತಿಗಳೊಂದಿಗೆ ಲಕ್ಷ ಲಕ್ಷ ವಿದ್ಯಾರ್ಥಿಗಳನ್ನು ಹೊತ್ತು ಮಹತ್ವದ ಗಾಂಭೀರ್ಯದ ಮುಂದಡಿ ಇಟ್ಟಿದೆ. ಈ ನೆಲದ ಸಂಸ್ಕೃತಿಗೆ, ಈ ನೆಲದ ಅಸ್ಮಿತೆಗೆ, ಈ ನೆಲದ ಚಿಂತನೆಗೆ ಚ್ಯುತಿ ಬಾರದ ರೀತಿಯಲ್ಲಿ, ಬಂದರೆ, ಅಂತಹ ದೇಶ ವಿರೋಧಿಗಳಿಗೆ, ಮತಾಂಧರರಿಗೆ ತೀಕ್ಷ್ಣರೀತಿಯಲ್ಲಿ ಉತ್ತರ ಕೊಟ್ಟು, ’ರಾಷ್ಟ್ರವೇ ಮೇಲು, ರಾಷ್ಟ್ರವೊಂದೇ ಎಂದು ಸಾರಿ ಸಾರಿ ಸಾರಿದ ವಿದ್ಯಾರ್ಥಿ ಸಂಘಟನೆ ಅಭಾವಿಪ.
ಸಾಮೂಹಿಕತೆಗೆ ಒತ್ತುಕೊಟ್ಟು, ಪರಿವಾರ ಕಲ್ಪನೆಗೆ ಮಹತ್ವವನ್ನಿತ್ತು, ಪಕ್ಷ ರಾಜಕಾರಣದಿಂದ ದೂರ ಉಳಿದು,ರಾಷ್ಟ್ರ ರಾಜಕಾರಣಕ್ಕೆ ಮಾನ್ಯತೆ ಕೊಟ್ಟು, ಶೈಕ್ಷಣಿಕ ಪರಿವಾರದೊಂದಿಗೆ ಸಮನ್ವಯತೆ ಸಾಧಿಸಿ,ವಿದ್ಯಾರ್ಥಿಗಳ ಧ್ವನಿಯಾಗಿ, ರಾಷ್ಟ್ರ ಕಟ್ಟುವ ಚಳುವಳಿಯಾಗಿದೆ ಪರಿಷತ್.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂಬುದು ಕೇವಲ ಒಂದು ಸಂಘಟನೆಯಾಗಿ ಉಳಿಯದೆ, ಈ ದೇಶದ, ಈ ಮಣ್ಣಿನ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರುವ ಸರ್ವಜನವಂದ್ಯ ರಾಷ್ಟ್ರೀಯ ಆಂದೋಲನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯತೆಯನ್ನು ಅಮೂಲಾಗ್ರವಾಗಿ ತರುವಲ್ಲಿ 1948 ರಿಂದ ನಿರಂತರ ಶ್ರಮವಹಿಸಿದೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ.
ಶಿಕ್ಷಣ ಕ್ಷೇತ್ರದ ಕ್ರಾಂತಿ ಆಭಾವಿಪ, ಕಳೆದ 73 ವರ್ಷಗಳಿಂದ ಸ್ವಂತಕ್ಕೆ ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಅಗಾಧ ಚಿಂತನೆಯೊಂದಿಗೆ, ನಾವಿನ್ಯತೆಯ ಜೊತೆಗೆ, ಸರ್ವಸ್ಪರ್ಶಿಯಾಗಿ ಸರ್ವ ವ್ಯಾಪಿಯಾಗಿ ಭಾರತದ ಕ್ಯಾಂಪಸ್ಸುಗಳಲ್ಲಿ ದೇಶ ವಿರೋಧಿ ಚಿಂತನೆಗಳನ್ನು ಮಟ್ಟ ಹಾಕಿ,ರಾಷ್ಟ್ರೀಯತೆಯನ್ನು ಸಾರಿ, ಸಮರ್ಥ ಭಾರತಕ್ಕಾಗಿ ಪ್ರಬುದ್ಧ ನಾಯಕರನ್ನು ರಾಷ್ಟ್ರಕ್ಕೆ ನೀಡುತ್ತಾ ಬಂದಿದೆ.ಈ ಅನನ್ಯ ಸಂಘಟನೆಗಾಗಿ, ಇದರ ಧ್ಯೇಯಕ್ಕಾಗಿ,ಇದರ ಸಿದ್ಧಾಂತಕ್ಕಾಗಿ ಮಡಿದ ನೂರಾರು ಕಾರ್ಯಕರ್ತರಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಾ, ಇಂತಹ ಭಾರತದ ಹೆಮ್ಮೆಯ ಸಂಘಟನೆಯ ಮೂಲಕ ರಾಷ್ಟ್ರ ಸೇವೆಯಲ್ಲಿ ತೊಡಗಿದ ಎಲ್ಲಾ ಕಾರ್ಯಕರ್ತರಿಗೂ ವಂದನೆಗಳು. ಜ್ಞಾನ ಶೀಲ ಏಕತೆಯ ಮೂಲಕ ಗಡಿಯೊಳಗಿನ ಯೋಧರನ್ನು ಸಜ್ಜುಗೊಳಿಸುವ ಸಂಘಟನೆಗೆ ಸರ್ವೋಪರಿ ಶರಣು.
ಕೃಪೆ- https://news13.in/