ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತರಾದ ದಿ.ರವೀಂದ್ರ ಭಟ್ ಬಳಗುಳಿ ಅವರ ನೆನಪಿನ ಕಾರ್ಯಕ್ರಮ ಸ್ಥಳೀಯ ಆಧಾರ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಬಾಲಭವನದಲ್ಲಿ ಜು.6ರಂದು ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ. ದಿ.ರವೀಂದ್ರ ಭಟ್ಟ ಬಳಗುಳಿ ಬರೆದಂತೆ ಬದುಕಿದ ಪತ್ರಕರ್ತರು. ಅವರ ಬರಹ- ಬದುಕು- ಬದ್ಧತೆಯ ಸ್ಮರಣೆ ನಡೆಯಲಿದೆ. ಇದೆ ಸಂದರ್ಭದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.
ಈ ಕುರಿತು ಅವರು ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನವೆಂಬರ್ನಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದ ರವೀಂದ್ರ ಭಟ್ಟ ಬಳಗುಳಿ ಅವರೊಂದಿಗೆ ನಮ್ಮ ಸಂಸ್ಥೆಗೆ ಮತ್ತು ನಮಗೆ ಆತ್ಮೀಯವಾದ ಸಂಬಂಧ ಇತ್ತು. ಅವರು ಸಂಸ್ಥೆಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.ನಂತರದಲ್ಲಿ ಕಾನೂನು ಸಲಹೆಗಾರರಾಗಿದ್ದು ಮಾರ್ಗದರ್ಶನ ಮಾಡಿದ್ದರು.
ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿದ್ದ ಅವರು ಸುಮಾರು 31 ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ತಾಲೂಕ ವರದಿಗಾರರಾಗಿದ್ದರು. ಅತ್ಯುತ್ತಮ ಬರಹಗಾರರಾಗಿ, ವಕೀಲ ವೃತ್ತಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದರು.ತಾಲೂಕ ಪತ್ರಕರ್ತರ ಸಂಘದ ಎರಡು ಅವಧಿಗೆ ಅಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಮಗೇಗಾರಿನ ಗಣಪತಿ ದೇವಾಲಯದ ಮೋಕ್ತೇಶ್ವರರಾಗಿ ಸೇವೆ ಸಲ್ಲಿಸಿದ್ದರು.ಹೀಗೆ ಸಾಮಾಜಿಕ, ಧಾರ್ಮಿಕವಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದರು.
ತಮ್ಮ ಬರಹಗಳಲ್ಲಿ ನಿಖರತೆಯನ್ನು ಹೊಂದಿದ ಇವರು ತಾಲೂಕಿನಲ್ಲಿ ಅನೇಕ ರಚನಾತ್ಮಕ, ಅಭಿವೃದ್ಧಿಪರವಾದ ಸುದ್ದಿಗಳನ್ನು ಮಾಡುವ ಮೂಲಕ ಪತ್ರಿಕೆಯಲ್ಲಿ ಬೆಳಕು ಚೆಲ್ಲಿದ್ದರು. ಸ್ನೇಹ ಜೀವಿಯಾದ ರವೀಂದ್ರ ಭಟ್ಟ ಮೃದು ಮಾತು, ಆಳವಾದ ಅಧ್ಯಯನ, ಶಿಸ್ತಿನ ಸರಳವಾದ ಜೀವನ ನಡೆಸಿದ್ದರು. ತನ್ನ ಬರಹದಲ್ಲಿ ವಿಶೇಷವಾಸ ಶೈಲಿಯನ್ನು ರೂಢಿಸಿಕೊಂಡಿದ್ದ ಇವರು ಅನಗತ್ಯವಾಗಿ ಯಾರನ್ನು ಟೀಕಿಸುತ್ತಿರಲಿಲ್ಲ. ಸಮಾಜಕ್ಕೆ ಉತ್ತಮ ಸಂದೇಶವನ್ನು ಬಿತ್ತುವ ರೀತಿಯಲ್ಲಿ ತನ್ನ ಕಾಯಕವನ್ನು ಪ್ರೀತಿಯಿಂದ ನಿರ್ವಹಿಸುಯತ್ತಿದ್ದರು.ಇವೆಲ್ಲವು ಕೂಡ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಆದರ್ಶ ವ್ಯಕ್ತಿತ್ವದ, ಅಪರೂಪದ ಪತ್ರಕರ್ತರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ಅವರನ್ನು ಇನ್ನಷ್ಟು ಪರಿಚಯಿಸುವ, ನೆನಪಿಸಿಕೊಳ್ಳು ಒಂದು ಪುಟ್ಟ ಪ್ರಯತ್ನ ಇದಾಗಿದೆ. ಈ ಕಾರ್ಯಕ್ರಮಕ್ಕೆ ದಿ.ರವೀಂದ್ರ ಭಟ್ಟ ಬಳಗುಳಿಯವರ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ್ತೊಮ್ಮೆ ಅವರ ನೆನಪಿಸುವ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪ್ರಶಾಂತ ಡಿ.ಶೇಟ್, ಟಿ.ಕೆ.ಎಂ.ಆಜಾದ, ಪ್ರಶಾಂತ ನಾಯ್ಕ ಇದ್ದರು.
ಅಂತೆಯೇ ಅಂದು ಮಧ್ಯಾಹ್ನ 3 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ದಿ.ರವೀಂದ್ರ ಭಟ್ಟ ಬಳಗುಳಿಯವರ ಬರಹಗಳ ಕುರಿತಾಗಿ ಪ್ರಜಾವಾಣಿ ಪತ್ರಿಕೆಯ ಕಾರ್ಯನಿವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಮಾತನಾಡಲಿದ್ದಾರೆ. ಅವರ ಬದುಕಿನ ಕುರಿತಾಗಿ ಅವರ ಸಹೋದರ, ಹಿರಿಯ ಪತ್ರಕರ್ತ, ಸುದ್ದಿ ಟಿವಿ ಪ್ರಧಾನ ಸಂಪಾದಕ ಶಶಿಧರ ಭಟ್ಟ ಮಾತನಾಡುವರು. ಅವರ ಬದ್ಧತೆಯ ಕುರಿತಂತೆ ಸಮಾಜಮುಖಿ ಪತ್ರಿಕೆ ಸಂಪಾದಕ ಕನ್ನೇಶ ನಾಯ್ಕ ಕೋಲಶಿರ್ಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ವಹಿಸಲಿದ್ದಾರೆ.
ಗೌರವ ಸನ್ಮಾನ: ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಈ ಹಿಂದೆ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ನಾಲ್ವರು ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಹಿಂದೆ ಪ್ರಜಾವಾಣಿ ಪತ್ರಿಕೆಯ ವರದಿಗಾರರರಾಗಿ ಕಾರ್ಯನಿರ್ವಹಿಸಿರುವ ನಿವೃತ್ತ ಶಿಕ್ಷಕ, ಸಹಕಾರಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಬಿ.ಬಿ.ನಾಯಕ, ಶ್ರೀಸಾಮಾನ್ಯ ಹಾಗೂ ಮುಂಗಾರು ಪತ್ರಿಕೆಯ ವರದಿಗಾರರಾಗಿ, ಕಡಲಧ್ವನಿ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿರುವ ಶಿವಾನಂದ ಹೊನ್ನೆಗುಂಡಿ, ಮೂರು ದಶಕಗಳ ಕಾಲ ಉದಯವಾಣಿ ಹಾಗೂ ಎರಡು ದಶಕಗಳಿಗೂ ಹೆಚ್ಚು ಸಮಯ ಲೋಕಧ್ವನಿ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ, ಮುನ್ನಡೆ ಪತ್ರಿಕೆಯ ಉಪ ಸಂಪಾದಕರಾಗಿ, ಸಂಪಾದಕರಾಗಿ ದೀರ್ಘಕಾಲ ಕಾರ್ಯನಿರ್ವಹಿಸಿರುವ ಅಂಕಣಕಾರರು, ಯಕ್ಷಗಾನ ಅರ್ಥದಾರಿಗಳಾದ ಜಿ.ಕೆ.ಭಟ್ಟ ಕಶಿಗೆ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.